Advertisement

ಜಾರುಕುದ್ರು: ಇನ್ನೂ ಶುರುವಾಗದ ಸಂಪರ್ಕ ಸೇತುವೆ ಕಾಮಗಾರಿ

06:35 AM Sep 27, 2018 | Team Udayavani |

ವಿಶೇಷ ವರದಿ- ಕಟಪಾಡಿ: ಮಳೆಗಾಲ ಮುಗಿಯುತ್ತ ಬಂದರೂ ಇನ್ನೂ ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಿತ್ರೋಡಿ -ಜಾರುಕುದ್ರು ಸಂಪರ್ಕ ಸೇತುವೆ ಕಾಮಗಾರಿ ಆರಂಭಗೊಳ್ಳದೆ ಕುದ್ರು ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. 
 
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯ 6.54 ಕೋಟಿ ವೆಚ್ಚದಲ್ಲಿ ಆಗಬೇಕಿದ್ದು, ಇದಕ್ಕೆ ಗುದ್ದಲಿ ಪೂಜೆ ನಡೆದು ವರ್ಷವೇ ಕಳೆದಿದೆ. ಮೇನಲ್ಲಿ ಮಳೆ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿದ್ದು, ಈಗ ಮತ್ತೆ ಕಾಮಗಾರಿ ಶುರುವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.

Advertisement

ಮನೆಗೆ ತಲುಪಲು ಸಾಧ್ಯವಿಲ್ಲ
ಸಂಪರ್ಕ ಸೇತುವೆಗೆ ತಲಾ 25 ಮೀಟರ್‌ ಅಂತರದಲ್ಲಿ 6 ಪಿಲ್ಲರ್‌ ಕಾಮಗಾರಿಗೆ ಬೇಸ್‌ ಹಾಕಲಾಗಿದೆ. ಇದರ ಪಕ್ಕದಲ್ಲೇ ಮಣ್ಣು ಹಾಕಿ ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದೀಗ ಮಣ್ಣು ಶಿಥಿಲಗೊಂಡಿದ್ದು, ಮುಂದಿನ ಮಳೆಗಾಲದ ಒಳಗೆ ಕಾಮಗಾರಿ ನಡೆಯದೇ ಇದ್ದರೆ, ತಾತ್ಕಾಲಿಕ ವ್ಯವಸ್ಥೆಗಳೂ ಮಳೆಗೆ ಕೊಚ್ಚಿಹೋಗಿ ಸಂಪೂರ್ಣ ಸಂಪರ್ಕ ಕಡಿತಗೊಳ್ಳಲಿದೆ. ಈ ಸೇತುವೆ ಕಾಮಗಾರಿಗಾಗಿ ಹೊಳೆಯಲ್ಲಿ ಡ್ರೆಜ್ಜಿಂಗ್‌ ನಡೆಸಲಾಗಿದ್ದು, ಮರಳನ್ನು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಹೊಳೆಯು ಇದೀಗ ಸುಮಾರು 30 ಅಡಿಗಿಂತಲೂ ಮಿಕ್ಕಿ ಆಳವನ್ನು ಹೊಂದಿದ್ದು, ದೋಣಿಯಲ್ಲಿ ಸಾಗಲು ಸಾಧ್ಯವಿಲ್ಲ  ಎಂದು ಸ್ಥಳೀಯರು ಹೇಳುತ್ತಾರೆ.  

ಗ್ರಾಮಸಭೆಯಲ್ಲೂ ಪ್ರಸ್ತಾವ 
ಇಲ್ಲಿ ನದಿ ನೀರು ಸರಾಗವಾಗಿ ಹರಿಯದೆ ಮತ್ತೂಂದು ಭಾಗದಲ್ಲಿ ನದಿ ಕೊರೆತ ಸಂಭವಿಸುತ್ತಿದೆ. ಮಳೆಗಾಲದಲ್ಲಿ ಸಂಕಷ್ಟ ಎದುರಾದರೆ, ಸುಮಾರು 40 ನಿವಾಸಿಗಳಿಗೆ ತೊಂದರೆ ಕಟ್ಟಿಟ್ಟದ್ದು ಎಂದು ಅಲ್ಲಿನವರು ಭಯ ವ್ಯಕ್ತಪಡಿಸುತ್ತಿದ್ದಾರೆ. ಸಮರೋಪಾದಿಯಲ್ಲಿ ಸಾಗಬೇಕಿದ್ದ ಸೇತುವೆ ಕಾರ್ಯ ಕುಂಟುತ್ತಿರುವುದರ ಬಗ್ಗೆ ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿದೆ. ತುರ್ತಾಗಿ ಕಾಮಗಾರಿ ಪುನರಾರಂಭವಾಗಬೇಕಿದೆ ಎಂದು ಸದಸ್ಯ ಗಿರೀಶ್‌ ವಿ.ಸುವರ್ಣ ಪ್ರತಿಕ್ರಿಯಿಸಿದ್ದಾರೆ.

ಬವಣೆಗೆ ಮುಕ್ತಿ ಯಾವಾಗ?
ಉದ್ಯಾವರ  ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹರಿಯುವ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ಜಾರುಕುದ್ರುಗೆ ಸಂಪರ್ಕವನ್ನು ಕಲ್ಪಿಸಲು  175 ಮೀ. ಉದ್ದ ಮತ್ತು 7.5 ಮೀ. ಅಗಲದ ಸಂಪರ್ಕ ಸೇತುವೆ ಯೋಜನೆ ಇದು. ಈ ಯೋಜನೆಯಿಂದ ಕುದ್ರು ನಿವಾಸಿಗಳು ಹೊಳೆ ದಾಟಿ ದೋಣಿಯಲ್ಲಿ ಹೋಗುವ ಸಮಸ್ಯೆಗೆ ಮುಕ್ತಿ ಸಿಕ್ಕಿತು ಎಂಬ ಸಂತಸದಲ್ಲಿದ್ದರು. ಆದರೆ ಈಗ ಕಾಮಗಾರಿ ನಡೆಯದೇ ಅವರ ನಿರೀಕ್ಷೆಗೆ ಪೆಟ್ಟುಬಿದ್ದಿದೆ.  

ಅಧಿಕಾರಿಗಳೊಂದಿಗೆ ಸಮಾಲೋಚನೆ 
ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭಕ್ಕೆ ಸಂಬಂಧಿತ ಇಲಾಖಾಧಿಕಾರಿಗಳು ಮತ್ತು ಎಂಜಿನಿಯರ್‌ ಅವರನ್ನು ಕರೆಸಿ ಸಮಾಲೋಚನೆ ನಡೆಸಲಾಗುತ್ತದೆ. ಸಮಸ್ಯೆಗಳೇನಾದರೂ ಇದ್ದಲ್ಲಿ ಬಗೆಹರಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. 
– ಲಾಲಾಜಿ ಆರ್‌. ಮೆಂಡನ್‌, ಕಾಪು ಶಾಸಕ

Advertisement

ಸೆ. 26ರಿಂದ ಕಾಮಗಾರಿ ಪುನರಾರಂಭ
ತೀವ್ರ ಮಳೆ ಇದ್ದುದರಿಂದ ಕಾಮಗಾರಿಯನ್ನು ನಡೆಸಿಲ್ಲ. ಸೆ. 26ರಿಂದ ಕಾಮಗಾರಿ ಪುನರಾರಂಭಗೊಳಿಸಲಾಗುತ್ತದೆ. 2019ರ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆಯಡಿ ಕಾಲಾವಕಾಶ ಇದೆ.  
– ರಮೇಶ್‌ ಎಚ್‌.ವಿ., ಯೋಜನಾ ವಿಭಾಗದ ಎಕ್ಸಿಕ್ಯೂಟಿವ್‌ ಇನ್‌ಚಾರ್ಜ್‌.

Advertisement

Udayavani is now on Telegram. Click here to join our channel and stay updated with the latest news.

Next