ಬೆಂಗಳೂರು: ಪರಿಚಯಸ್ಥರ ಜತೆ ಆತ್ಮೀಯತೆ ಬೆಳೆಸಿಕೊಂಡು, ಅವರ ವಿಶ್ವಾಸ ಗಳಿಸಿ, ಅವರಿಂದ ಲಕ್ಷಾಂತರ ರೂ. ಸಾಲ ಹಾಗೂ ಚಿನ್ನಾಭರಣ ಕಡ ಪಡೆದು ವಂಚಿಸುತ್ತಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಾಗೇಪಲ್ಲಿ ನಿವಾಸಿ ನಿರಂಜನ್ (30) ಎಂಬಾತನನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಉಪನಗರದಲ್ಲಿ ವಾಸವಿರುವ ಆರೋಪಿ, ಟ್ರಾವೆಲ್ಸ್ ಒಂದರಲ್ಲಿ ಕಾರು ಚಾಲಕನಾಗಿದ್ದಾನೆ. ಕಾರು ಹೊಂದಿರುವ ತನ್ನ ಪರಿಚಯದವರ ಬಳಿ ತೆರಳಿ, “ನಿಮ್ಮ ಕಾರನ್ನು ನನಗೆ ಕೊಡಿ. ಟ್ರಾವೆಲ್ ಏಜೆನ್ಸಿಗೆ ಲಿಂಕ್ ಮಾಡಿಸಿಕೊಡುತ್ತೇನೆ. ಆರಾಮಾಗಿ ಆದಾಯ ಗಳಿಸಬಹುದು’ ಎಂದು ನಯವಾಗಿ ಮಾತನಾಡಿ ನಂಬಿಸುತ್ತಿದ್ದ.
ಈತನ ಮಾತು ನಂಬಿದವರು ಕಾರು ಕೊಟ್ಟು ಕಳಿಸುತ್ತಿದ್ದರು. ಆದರೆ ಹೀಗೆ ಪಡೆದ ಕಾರುಗಳನ್ನು ಕೊಂಡೊಯ್ದ ರೋಪಿ ನೆರೆ ರಾಜ್ಯಗಳಲ್ಲಿ ಮಾರಾಟ ಮಾಡುವ ಮೂಲಕ ಪರಿಚಯದವರು ತನ್ನ ಮೇಲಿರಿಸಿದ್ದ ನಂಬಿಕೆಗೆ ದ್ರೋಹ ಮಾಡುತ್ತಿದ್ದ. ಈತನ ಬಂಧನದಿಂದ ರಾಜಾನುಕುಂಟೆ ಮತ್ತು ಯಲಹಂಕ ಉಪನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಮಹಿಳೆಯಿಂದ ಆರು ಲಕ್ಷ ಪಡೆದಿದ್ದ: ತನ್ನ ನೆರೆ ಮನೆಯ ನಿವಾಸಿ ಕವಿತಾ ಎಂಬುವವರನ್ನು ಪರಿಚಯಿಸಿಕೊಂಡಿದ್ದ ನಿರಂಜನ, “ನಾನು ಕೆಲಸ ಮಾಡುವ ಟ್ರಾವೆಲ್ಸ್ ಏಜೆನ್ಸಿಗೆ ನಿಮ್ಮ ಕಾರನ್ನು ಲಿಂಕ್ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದ. ಕವಿತಾ ಕೂಡ ಈತನ ಮಾತು ನಂಬಿದ್ದರು. ಈ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಂಡ ಆರೋಪಿ, ಆಗಾಗ ಕವಿತಾ ಅವರಿಂದ ಹಣ ಪಡೆಯುತ್ತಿದ್ದ. ಹೀಗೆ ಕವಿತಾ ಅವರು ನಿರಂಜನನಿಗೆ ಸುಮಾರು 6 ಲಕ್ಷ ರೂ. ನೀಡಿದ್ದರು!
ಇತ್ತೀಚೆಗೆ ಮನೆಯ ಶುಭಕಾರ್ಯ ಪ್ರಯುಕ್ತ ಕವಿತಾ ಅವರು ಲಕ್ಷಾಂತರ ರೂ. ಮೌಲ್ಯದ ಒಡವೆಗಳನ್ನು ದೇವರ ಕೊಣೆ ಬಳಿ ಇಟ್ಟಿದ್ದರು. ಇದೇ ವೇಳೆ ಮನೆಗೆ ಬಂದ ನಿರಂಜನ್, ಕವಿತಾ ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಚಿನ್ನಾಭರಣ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನು ಕದ್ದೊಯ್ದಿದ್ದಾನೆ. ಕಾರನ್ನು ತಮಿಳುನಾಡಿನಲ್ಲಿ ಅಡಮಾನ ಇಟ್ಟಿದ್ದಾನೆ.
ಹಾಗೇ “ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ರಾಜಾನುಕುಂಟೆಯಲ್ಲಿ ಪರಿಚಯಸ್ಥ ಉದ್ಯಮಿಯೊಬ್ಬರ ಇನೋವಾ ಕಾರು ತೆಗೆದುಕೊಂಡು ಹೋಗಿದ್ದ ಆರೋಪಿ, ಆ ವಾಹನವನ್ನು ರಾಮಮೂರ್ತಿನಗರದಲ್ಲಿ ಅಡಮಾನ ಇರಿಸಿದ್ದ.
ಸದ್ಯ ಆರೋಪಿಯಿಂದ ಇನೋವಾ ಕಾರು ವಶಕ್ಕೆ ಪಡೆಯಲಾಗಿದೆ. ಕಾರು, ಚಿನ್ನಾಭರಣ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ ನಿರಂಜನ್, ಮಾದಕ ವಸ್ತು, ಮದ್ಯ ಸೇವನೆ, ವೇಶ್ಯಾವಾಟಿಕೆಗೆ ಹಣ ವ್ಯಯಿಸುತ್ತಿದ್ದ. ಇಷ್ಟೇ ಅಲ್ಲದೆ ಹತ್ತಾರು ಸ್ನೇಹಿತರಿಂದ ಈತ ಲಕ್ಷಾಂತ ರೂ. ಸಾಲ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.