Advertisement

ನಿದ್ದೆಗೆಡಿಸಿದ ಬಂಡಾಯ ಸ್ಪರ್ಧಿಗಳು

01:25 PM May 29, 2019 | Team Udayavani |

ನಂಜನಗೂಡು: ಇಲ್ಲಿನ ನಗರಸಭೆ 31 ವಾರ್ಡುಗಳಿಗೆ 134 ಮಂದಿ ಸ್ಪರ್ಧಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದರೆ ಹಲವಡೆ ಬಿಜೆಪಿ – ಕಾಂಗ್ರೆಸ್‌ ಬಂಡಾಯ ಗಾರರು ಅಧಿಕೃತ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

Advertisement

ಶಾಸಕರು ಸಂಸದರ ಬೆಂಬಲದೊಂದಿಗೆ ನಗರಸಭೆಯ 2 ದಶಕಗಳ ಅತಂತ್ರ ಹೋಗಲಾಡಿಸಿ ಅಧಿಕಾರ ಕಬಳಿಸಲು ಬಿಜೆಪಿ ಹಾತೊರೆಯುತ್ತಿದ್ದರೆ ಶಾಸಕರು ಹಾಗೂ ಪಕ್ಷದ ಸ್ಥಳಿಯ ಮುಖಂಡರ ನಡುನ ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ವರೆಗಿನ ಗೊಂದಲವನ್ನೇ ಅಧಿಕಾರ ಹಿಡಿಯುವ ಏಣಿಯಾಗಿಸಿಕೊಳ್ಳಲು ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಅವರ ನೇತೃತ್ವದ ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. ಕಾಂಗ್ರೆಸ್‌ -ಬಿಜೆಪಿಯ ಅಧಿಕಾರದ ಹಣಾಹಣಿಯಲ್ಲಿ ಅತಂತ್ರ ಸೃಷ್ಟಿಯಾಗಿ ತಮಗೊಂದಿಷ್ಟು ಪಾಲು ಯಾರಿಂದ ಸಿಕ್ಕೀತು ಎನ್ನುವ ಆಸೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್‌. ಮಹದೇವಸ್ವಾ ಅವರದ್ದಾಗಿದೆ.

ಕಾಂಗ್ರೆಸ್‌ – ಬಿಜೆಪಿ ಟಿಕೆಟ್ ವಂಚಿತರು ಹಲವಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲನ್ನೇ ಗುರಿಯಾಗಿಸಿಕೊಂಡು ಗುಪ್ತ ಹೋರಾಟ ಕೈ ಹಾಕಿದ್ದಾರೆ. ಆದರೆ, ಗೆಲವು ಯಾರಿಗೆ ಎಂಬುದನ್ನು ನಂಜನಗೂಡಿನ 42 ಸಾವಿರಕ್ಕೂ ಹೆಚ್ಚು ಮತದಾರರು ಬುಧವಾರ ತೀರ್ಮಾನಿಸಲಿದ್ದಾರೆ.

ಗುಂಪುಗಾರಿಕೆ ಕಾಂಗ್ರೆಸ್‌: ಕೈ ಪಕ್ಷದಲ್ಲೂ ಗುಂಪುಗಾರಿಕೆ ಇದ್ದು ಸ್ಥಳೀಯರಿಗಿಂತ ರಾಜ್ಯ ಮಟ್ಟದ ನಾಯಕರಲ್ಲಿನ ಅಸಮಾ ಧಾನದ ಬಿಸಿ ತಾಗುತ್ತಿದೆ. 27 ವಾರ್ಡುಗಳಿಗೂ ಅಭ್ಯರ್ಥಿ ಇಲ್ಲದ ಜನತಾ ದಳದಿಂದಲೂ ಅಲ್ಲಲ್ಲಿ ಬಂಡಾಯ ರಾಜಕಾರಣವಿದ್ದು ಅಷ್ಟೇನು ಪ್ರಭಾವ ಬೀರಲಾರದು ಎಂದು ತಿಳಿದು ಬಂದಿದೆ

ಎಚ್ಸಿಎಂ ರಂಗ ಪ್ರವೇಶ: ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಕೇಶವ ಮೂರ್ತಿ ಅವರ ವಿರುದ್ಧ ಅಸಮಾ ಧಾನದಿಂದ ಕುದಿಯುತ್ತಿರುವ ಲೋಕೋಪ ಯೋಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಈಗ ನಂಜನಗೂಡಿನ ನಗರಸಭಾ ಚುನಾವಣೆಗೆ ರಂಗ ಪ್ರವೇಶ ಮಾಡಿದ್ದಾರೆ.

Advertisement

ಭಾನುವಾರ ನಂಜನಗೂಡಿಗೆ ಆಗಮಿಸಿ ಎಲ್ಲಾ 31 ಅಭ್ಯರ್ಥಿಗಳ ಸಭೆ ನಡೆಸಿದ್ದೂ ಅಲ್ಲದೆ ಅವರನ್ನೆಲ್ಲಾ ಆರ್ಥಿಕವಾಗಿ ಹುರಿ ದುಂಬಿಸಿ ವಾಪಸಾಗಿರುವುದು ತಾಲೂಕು ಕಾಂಗ್ರೆಸ್‌ ಅನ್ನು ಮುಂದಿನ ರಾಜಕಾರಣದ ದಿಕ್ಸೂಚಿಯಾಗಿದೆ ಎನ್ನಲಾಗಿದೆ.

ಬಿಜೆಪಿ ಪಾಲಿಗೆ ಹೆಚ್ಚು ಮಹತ್ವ ಪಡೆದಿದೆ‌:

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚು ಮತಗಳು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ ಅವರ ಪಾಲಿಗೆ ಅತ್ಯಂತ ಮಹತ್ತರವಾದ ಚುನಾವಣೆ ಇದಾಗಿದೆ. ಟಿಕೆಟ್ ಹಂಚಿಕೆಯಲ್ಲಿನ ಸ್ಥಳೀಯ ಅಸಮಾಧಾನ ಬಿಜೆಪಿಯ ಗೆಲುವಿಗೆ ಅನೇಕ ವಾರ್ಡುಗಳಲ್ಲಿ ಮುಳ್ಳಾಗಲಿದೆ ಎನ್ನಲಾಗುತ್ತಿದೆ. ಮೊದಲೇ ಹತ್ತಾರು ಬಣಗಳಾಗಿದ್ದ ನಂಜನಗೂಡು ಬಿಜೆಪಿ ಶ್ರೀನಿವಾಸ ಪ್ರಸಾದರಿಂದ ಒಂದಾಗಿ ಕಾಣುತ್ತಿದ್ದರೂ ಒಳಗೊಳಗೆ ಒಬ್ಬರ ವಿರುದ್ಧ ಇನ್ನೊಬ್ಬರ ಮಸಲತ್ತು ಚಾಳಿ ಈಗಲೂ ನಡೆಯುತ್ತಿದೆ.
● ಶ್ರೀಧರ ಆರ್‌.ಭಟ್
Advertisement

Udayavani is now on Telegram. Click here to join our channel and stay updated with the latest news.

Next