ಬೆಂಗಳೂರು: “ಅತ್ಯಾಚಾರಕ್ಕೊಳಗಾದ ಬಳಿಕ ನಿತ್ರಾಣಗೊಂಡು ನಿದ್ದೆಗೆ ಜಾರಿದ ಕಾರಣ ದೂರು ನೀಡಲು ವಿಳಂಬವಾಯಿತು” ಎಂಬ ಸಂತ್ರಸ್ತ ಮಹಿಳೆಯ ಸಮಜಾಯಿಷಿಯನ್ನು ಒಪ್ಪದ ಹೈಕೋರ್ಟ್ ಅತ್ಯಾಚಾರ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿ 22 ವರ್ಷದ ರಾಕೇಶ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಆರೋಪಿಯು ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸ ಬಾರದು, ಪೂರ್ವಾನುಮತಿ ಇಲ್ಲದೇ ವ್ಯಾಪ್ತಿ ಯಿಂದ ಹೊರಹೋಗಬಾರದು ಎಂಬ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ದೂರು ನೀಡಲು ವಿಳಂಬ ಆಗಿದ್ದಕ್ಕೆ “ಅತ್ಯಾಚಾರದಿಂದ ಬಸವಳಿದು ನಿದ್ರಿಸಿದೆ’ ಎಂದು ಸಂತ್ರಸ್ತ ಮಹಿಳೆ ಕಾರಣ ನೀಡಿದ್ದಾರೆ. ಆದರೆ, ಇದನ್ನು ಒಪ್ಪಲು ಸಾಧ್ಯವಿಲ್ಲ. ತನ್ನ ಮೇಲೆ ಅತ್ಯಾಚಾರ ನಡೆದಾಗ ಭಾರತೀಯ ಮಹಿಳೆಯ ಸಹಜ ಪ್ರತಿಕ್ರಿಯೆ ಇದಲ್ಲ.
ಹೀಗಾಗಿ, ದೂರುದಾರ ಮಹಿಳೆಯ ಆರೋಪ ಗಳನ್ನು ಈ ಹಂತದಲ್ಲಿ ನಂಬಲು ಕಷ್ಟವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಅತ್ಯಾಚಾರದಂತಹ ಆರೋಪವಿದೆ ಎಂಬ ಒಂದೇ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಬಂಧಿಸಲಾಗದು. ಮಹಿಳೆಯ ಮಾಲೀಕತ್ವದ ಕಂಪನಿಯಲ್ಲಿ ಎರಡು ವರ್ಷಗಳಿಂದ ಉದ್ಯೋಗ ಮಾಡುತ್ತಿರುವ ಆರೋಪಿಯು, ಲೈಂಗಿಕ ಸಂಪರ್ಕ ಬೆಳೆಸಲು ಒತ್ತಾಯಿಸಿದ ಕೂಡಲೇ ಆಕೆ ಕೊರ್ಟ್‌ಗೆ ಮೊರೆ ಹೋಗಿಲ್ಲ. ಆರೋಪಿಯೊಂದಿಗೆ ತನ್ನ ಕಚೇರಿಗೆ ತಡರಾತ್ರಿ 11 ಗಂಟೆಗೆ ಹೋಗಿರುವುದಕ್ಕೆ ಹಾಗೂ ಆರೋಪಿ ಜೊತೆಗೆ ಮದ್ಯ ಸೇವಿಸಿರುವುದಕ್ಕೆ ಮಹಿಳೆ ಸರಿಯಾದ ವಿವರಣೆ ನೀಡಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಸಂತ್ರಸ್ತೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಎಚ್.ಆರ್.ಕಂಪನಿಯಲ್ಲಿ ಆರೋಪಿ ರಾಕೇಶ್ ಕಳೆದ 2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕಳೆದ ಮೇ 2ರಂದು ಮಹಿಳೆ ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ದೂರು ದಾಖಲಿಸಿ, ಏ.22ರಂದು ರಾಕೇಶ್‌ರೋಂದಿಗೆ ಕಾರಿನಲ್ಲಿ ಕಚೇರಿಗೆ ಬಂದು ತನ್ನ ಮೇಲೆ ಅತ್ಯಾಚಾರವೆಸಗಿದ. 23ರಂದು ನನ್ನ ನಗ್ನ ಚಿತ್ರಗಳನ್ನು ನನಗೆ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಆರೋಪಿಯು ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೆಟ್ಟಿಲೇರಿದ್ದರು.