Advertisement

ಮಕ್ಕಳಲ್ಲಿ ಹೆಚ್ಚುತ್ತಿರುವ ನಿದ್ರಾಹೀನತೆ: ಅದಕ್ಕೇನು ಪರಿಹಾರ?

05:54 PM Oct 28, 2020 | Nagendra Trasi |

ಆನ್‌ಲೈನ್‌ ಕಲಿಕೆ ಎನ್ನುವ ಹೊಸ ಸ್ವರೂಪದ ಶಿಕ್ಷಣದಿಂದಾಗಿ ಮನೆಯೇ ಶಾಲೆಯ ರೂಪ ಪಡೆದಿದೆ. ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ತಪ್ಪಿ ಹೋಗಬಾರದು ಎನ್ನುವ ಕಳಕಳಿ ನಿಜವಾದರೂ ಕೆಲವು ವಿಚಾರಗಳಲ್ಲಿ ಇದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಒತ್ತಡ, ಭಯದಿಂದಾಗಿ ಮಕ್ಕಳಲ್ಲಿ ನಿದ್ರಾಹೀನತೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ನಿದ್ರಾ ಹೀನತೆಯನ್ನು ಹೇಗೆ ಹೋಗಲಾಡಿಸಬಹುದು, ಪೋಷಕರೇನು ಮಾಡಬೇಕು, ಶಿಕ್ಷಕರ ಪಾತ್ರವೇನು ಎನ್ನುವುದರ ಕುರಿತು ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸೌಜನ್ಯಾ ವಿವರಿಸಿದ್ದಾರೆ.

Advertisement

ತೊಂದರೆಗಳೇನು?
ನಿದ್ರಾಹೀನತೆಯಿಂದ ಮಕ್ಕಳಲ್ಲಿ ಕಿರಿಕಿರಿ, ಅಸಹನೆ, ವಿನಾಕಾರಣ ಸಿಟ್ಟು, ದೇಹಭಾರ, ಲವಲವಿಕೆಯಿಲ್ಲದೆ ಇರುವುದು, ನಿಶ್ಶಕ್ತಿ, ಬಳಲಿಕೆ, ಏಕಾಗ್ರತೆಯ ಕೊರತೆ, ಎಲ್ಲ ವಿಚಾರದಲ್ಲೂ ನಿರಾಸಕ್ತಿ, ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ ಮತ್ತಿತರ ತೊಂದರೆಗಳು ಕಾಡುತ್ತವೆ. ಬೆನ್ನು, ಭುಜ ನೋವು, ತಲೆಭಾರ, ಅದು ಮಕ್ಕಳಿಗೆ ಅರಿವಿಗೆ ಬರುವುದಿಲ್ಲ.

ಹೆಚ್ಚುತ್ತಿರುವ ನಿದ್ರಾಹೀನತೆ ಸಮಸ್ಯೆ
ಅಧ್ಯಯನವೊಂದರ ಪ್ರಕಾರ 2001ರಲ್ಲಿ ಶೇ.31ರಷ್ಟು ಮಕ್ಕಳಿಗೆ ನಿದ್ರಾಹೀನತೆ ಸಮಸ್ಯೆಯಿದ್ದರೆ, 2011ರಲ್ಲಿ ಇದು ಶೇ.46ಕ್ಕೆ ಏರಿದೆ. 2020ರಲ್ಲಿ ಶೇ.65ರ ವರೆಗೆ ಏರಿಕೆಯಾಗಿದೆ ಎನ್ನುವ ಮಾಹಿತಿಯಿದೆ. ಮಕ್ಕಳಾಗಲಿ ದೊಡ್ಡವರಾಗಲಿ 4 ತಾಸು ಮೊಬೈಲ್‌ ಬಳಸಿದರೆ 20 ನಿಮಿಷಗಳಷ್ಟು ನಿದ್ದೆಯ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯ.

ಪೋಷಕರು ಏನು ಮಾಡಬೇಕು?
*ಮಕ್ಕಳು ಮಲಗುವ ಮತ್ತು ಎದ್ದೇಳುವ ಸಮಯವನ್ನು ಸರಿಯಾಗಿ ನಿಗದಿಪಡಿಸಿಕೊಳ್ಳಿರಿ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.
*ಮಕ್ಕಳನ್ನು ದೈಹಿಕ ಚಟುವಟಿಕೆಯಿರುವಂತೆ ಮಾಡಬೇಕು. ಎಷ್ಟು ಕ್ರಿಯಾಶೀಲವಾಗಿರುತ್ತಾರೋ ಅಷ್ಟು ಮಾನಸಿಕ ಮತ್ತು ದೈಹಿಕವಾಗಿ ಅನುಕೂಲ.
*ಮಲಗಲು ಯೋಗ್ಯವಾದ ಕೋಣೆಯನ್ನು ಆಯ್ಕೆ ಮಾಡಿಕೊಳ್ಳಿ. ಬೆಡ್‌, ಬೆಡ್‌ಶೀಟ್‌ ಸ್ವಚ್ಛವಾಗಿರಲಿ.
*ಮಕ್ಕಳು ಮಲಗುವ ಕೋಣೆಯಲ್ಲಿ ಕಂಪ್ಯೂಟರ್‌, ಮೊಬೈಲ್‌ ಇರದಂತೆ ಎಚ್ಚರ ವಹಿಸಿ. ಕಂಪ್ಯೂಟರ್‌ ಇರುವ ಕೊಠಡಿಯಲ್ಲಿ ನೀವು ಒಳ ಹೋಗುವ ತತ್‌ಕ್ಷಣ
ನಿಮಗೆ ಕಂಪ್ಯೂಟರ್‌ ಸ್ಕ್ರೀನ್‌ ಕಾಣುವಂತೆ ಇರಲಿ. ಆಗ ಮಕ್ಕಳು ಕಂಪ್ಯೂಟರ್‌ನಲ್ಲಿ ಏನು ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತದೆ.

*ಮಲಗುವ ಮೊದಲು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳನ್ನು ಬಳಸದಂತೆ ಎಚ್ಚರ ವಹಿಸಿ.
*ಮಲಗುವ ಮುನ್ನ ಹಸಿವು ಇಲ್ಲದಿರಲಿ. ಮಲಗುವ ಮೊದಲು ಕಾಫಿŽ, ಟೀ ಬೇಡ. ದ್ರವಾಹಾರ ಸೇವನೆ ಕೂಡ ಕಡಿಮೆಯಿರಲಿ. ಇದರಿಂದ ಆಗಾಗ ಮೂತ್ರಶಂಕೆಯಿಂದ ಎಚ್ಚರವಾಗುವುದನ್ನು ತಡೆಯಬಹುದು.

Advertisement

ಶಿಕ್ಷಕರು ಏನು ಮಾಡಬೇಕು?
*ಮಕ್ಕಳ ದೈಹಿಕ ಚಟುವಟಿಕೆಗೆ ಒತ್ತು ನೀಡುವಂತಹ ಅಸೈನ್‌ಮೆಂಟ್‌ಗಳನ್ನು ಕೊಡಬಹುದು.
*ಮಕ್ಕಳು ಪ್ರಕೃತಿ, ನಿಸರ್ಗದಲ್ಲಿ ಬೆರೆತು, ಮಾಡುವಂತಹ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ.
*ನೈತಿಕ ಶಿಕ್ಷಣಕ್ಕೆ ಆನ್‌ಲೈನ್‌ ಪಾಠದಲ್ಲೂ ಒತ್ತು ಕೊಡಿ. ಆ ಮೂಲಕ ಮಕ್ಕಳಿಗೆ ಹಿರಿಯರೊಂದಿಗೆ ಬೆರೆಯುವಂತೆ, ಕತೆಗಳನ್ನು ಕೇಳುವಂತೆ ಮಾಡಿ.
*ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸುಮ್ಮನೆ ಹೇಳುವ ಬದಲು ವೈಜ್ಞಾನಿಕವಾಗಿ ಮನಮುಟ್ಟುವಂತೆ ಹೇಳಿ. ಆಗ ಮಕ್ಕಳು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.
*ಮಕ್ಕಳಿಗೆ ನೋಟ್ಸ್‌ ಕೊಡುವಾಗ, ಮಾಹಿತಿಗಾಗಿ ಆ ಲಿಂಕ್‌ ಅಥವಾ ವೆಬ್‌ ಸೈಟ್‌ ಬಳಸಿ ಎನ್ನುವ ಬದಲು ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಓದಲು ಹೇಳಿ.
*ಮೊಬೈಲ್‌ ಗೀಳು, ಸ್ಕ್ರೀನ್‌ ಅಡಿಕ್ಷನ್‌ ಬಗ್ಗೆ ಮಕ್ಕಳ ಹೆತ್ತವರಿಗೆ ಶಿಕ್ಷಕರು ಅಥವಾ ಶಿಕ್ಷಣ ಸಂಸ್ಥೆ ಕಡೆಯಿಂದ ತಿಂಗಳಿಗೊಮ್ಮೆ ವೆಬಿನಾರ್‌ ಮೂಲಕ ತಜ್ಞರಿಂದ
ಸಲಹೆಗಳನ್ನು ಕೊಡಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next