Advertisement
ನಮಗೆ ಜೀತ ವಿಮುಕ್ತಿ ಪತ್ರ ಕೊಡಿ ಎಂದು ಜೀತದಾಳುಗಳು ಮನವಿ ಮಾಡಿದರೆ, ಇವರು ಜೀತದಾಳುವೇ ಅಲ್ಲ ಎಂದು ಷರಾ ಬರೆಯುವ ಕೆಳಹಂತದ ಅಧಿಕಾರಿಗಳೇ ಹೆಚ್ಚು. ಪುನರ್ವಸತಿ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವ 15 ಸಾವಿರಕ್ಕೂ ಹೆಚ್ಚು ಜೀತದಾಳುಗಳಿಗೆ ವರ್ಷಗಳು ಕಳೆದರೂ ಪರಿಹಾರ ಸಿಕ್ಕಿಲ್ಲ.
Related Articles
ಜೀತ ಪದ್ಧತಿಯು ನಗರ ಹಾಗೂ ನಗರದ ಹೊರ ವಲಯಗಳಲ್ಲಿ ಇಟ್ಟಿಗೆ ಗೂಡು, ಸಣ್ಣ ಕೈಗಾರಿಕೆ, ಕಲ್ಲು ಕ್ವಾರಿ, ಮುಂತಾದ ಕಡೆಗಳಲ್ಲಿ ಆವಾಹ್ಯತವಾಗಿ ಸಾಗಿದೆ. ಓಡಿಶಾ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರರ ರಾಜ್ಯಗಳಿಂದ ಬಂದ ಕಾರ್ಮಿಕರು ಜೀತ ಪದ್ದತಿಗೆ ಒಳಗಾಗುತ್ತಿದ್ದಾರೆ. ಕನಿಷ್ಠ ವೇತನ, ಆರೋಗ್ಯ ವಿಮೆ, ಕುಡಿಯುವ ನೀರು, ಶೌಚಾಲಯ, ಶಿಕ್ಷಣ ಸೌಲಭ್ಯದಿಂದ ಅವರು ಮತ್ತು ಅವರನ್ನು ನಂಬಿ ಬಂದ ಕುಟುಂಬದ ಸದಸ್ಯರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಕೃಷಿ ವಲಯದಲ್ಲೂ ಜೀತ ಪದ್ಧತಿ ಈಗಲೂ ರೂಢಿಯಲ್ಲಿದೆ ಎಂದು ಸಮಿತಿ ಹೇಳಿದೆ.
Advertisement
ಅರ್ಜಿಗಳ ಪುನರ್‌ವಿಚಾರಣೆಗೆ ಸೂಚನೆ: ಜೀತದಾಳುಗಳನ್ನು ಗುರುತಿಸುವುದು, ಅರ್ಜಿಗಳ ವಿಚಾರಣೆ ನಡೆಸಿ ಬಿಡುಗಡೆ ಪತ್ರ ಹಾಗೂ ಪುನರ್ವಸತಿ, ಪರಿಹಾರ ಒದಗಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದರೂ, ಅಧೀನ ಅಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅದರಂತೆ ಪ್ರಸ್ತುತ ತಹಶೀಲ್ದಾರರು ಈ ಕೆಲಸ ಮಾಡುತ್ತಿದ್ದಾರೆ.
ಸ್ಥಳೀಯ ಅಧಿಕಾರಿಗಳು ಜೀತದಾಳು ಅಲ್ಲ ಎಂದು ಷರಾ ಬರೆಯುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೀತದಾಳುಗಳ ಗುರುತಿಸುವಿಕೆ ಮತ್ತು ಅರ್ಜಿಗಳ ವಿಚಾರಣೆ ವೇಳೆ ಸಾಕ್ಷ್ಯಾಧಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಕ್ತ ವಿಚಾರಣೆ ನಡೆಸದೆ ವರದಿಗಳನ್ನು ನೀಡಿದ್ದಲ್ಲಿ ಅಂತಹ ಪ್ರಕರಣಗಳನ್ನು ಮರು ವಿಚಾರಣೆ ಮಾಡಲು ಹಾಗೂ ಒಟ್ಟು ಅರ್ಜಿಗಳಲ್ಲಿ ಶೇ.8ರಷ್ಟು ಅರ್ಜಿಗಳನ್ನು ಉಪ ವಿಭಾಗಾಧಿಕಾರಿ ಹಾಗೂ ಶೇ.2ರಷ್ಟು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸಬೇಕು ಎಂದು ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದ್ದು, ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 2012ರಿಂದ 2016ರವರೆಗೆ 14,217 ಮಂದಿ 2017ರಲ್ಲಿ 1,099 ಹಾಗೂ 2018ರಲ್ಲಿ ಇಲ್ಲಿವರೆಗೆ 407 ಜೀತದಾಳುಗಳು ಬಿಡುಗಡೆ ಪತ್ರ, ಪರಿಹಾರ ಹಾಗೂ ಪುನರ್ವಸತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಇಲ್ಲಿತನಕ ಪರಿಹಾರ ಸಿಕ್ಕಿಲ್ಲ. ಪುನರ್ವಸತಿ, ಪರಿಹಾರ ಕೋರಿ ಬಂದ ಅರ್ಜಿಗಳನ್ನು 24 ಗಂಟೆಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಸರ್ಕಾರದ ಸೂಚನೆಯಿದ್ದರೂ, ಸ್ಥಳೀಯ ಮಟ್ಟದಲ್ಲಿ ವಿಚಾರಣೆ ಪೂರ್ಣಗೊಂಡು, ಜೀತದಾಳುಗಳು ಎಂದು ಗುರುತಿಸಲಾಗಿದ್ದರೂ, ವರ್ಷ ಕಳೆದರೂ 2,842 ಮಂದಿಗೆ ಉಪ ವಿಭಾಗಾಧಿಕಾರಿಗಳು ಇಲ್ಲಿವರೆಗೆ ಬಿಡುಗಡೆ ಪತ್ರ ಕೊಟ್ಟಿಲ್ಲ. 2012ರಿಂದ 2017ರವರೆಗೆ ಬಿಡುಗಡೆ ಪತ್ರ ಪಡೆದುಕೊಂಡಿರುವ 345 ಮಂದಿಗೆ ಇಲ್ಲಿತನಕ ಪುನರ್ವಸತಿ ಸಿಕ್ಕಿಲ್ಲ. ಜೀತದಾಳುಗಳಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಪತ್ರ ಕೊಟ್ಟ ಮೇಲಷ್ಟೇ ಪರಿಹಾರ ಮತ್ತು ಪುನರ್ವಸತಿ ಒದಗಿಸುವ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಇದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಅರ್ಜಿಗಳು ಬಾಕಿ ಉಳಿದಿರಬಹುದು. ಆದರೆ, ಬಿಡುಗಡೆ ಪತ್ರ ಬಂದಿರುವ ಎಲ್ಲ ಪ್ರಕರಣಗಳಲ್ಲಿ ಇಲಾಖೆಯಿಂದ ಕಾನೂನು ರೀತಿ ಪರಿಹಾರ ಮತ್ತು ಪುನರ್ವಸತಿ ಒದಗಿಸಲಾಗಿದೆ.
– ಎಲ್.ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ. ಜೀತದಾಳುಗಳ ಪರಿಹಾರ ಮತ್ತು ಪುನರ್ವಸತಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ತಮ್ಮ ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಿರುವ ಕಳಂಕದಿಂದ ತಪ್ಪಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಅರ್ಜಿಗಳ ವಿಚಾರಣೆ ವೇಳೆ ಜೀತದಾಳು ಅಲ್ಲ ಎಂದು ಟಿಪ್ಪಣಿ ಬರೆಯುತ್ತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಅರ್ಹ ಪ್ರಕರಣಗಳಲ್ಲಿ ಬಿಡುಗಡೆ ಪತ್ರ, ಪರಿಹಾರ, ಪುನರ್ವಸತಿ ಸಿಗಲು ವಿಳಂಬ ಆಗುತ್ತಿರುವುದಕ್ಕೆ ಸ್ಥಳೀಯ ಅಧಿಕಾರಿಗಳೇ ಕಾರಣ.
– ಕಿರಣ್ ಕಮಲ ಪ್ರಸಾದ್, ಸಂಚಾಲಕ, ಜೀವಿಕ ಸಂಸ್ಥೆ. – ರಫೀಕ್ ಅಹ್ಮದ್