ಇಸ್ಲಾಮಾಬಾದ್: ಸ್ವತಂತ್ರವಾದ ವಿದೇಶಾಂಗ ನೀತಿಯ ಮೂಲಕ ಭಾರತ ಪಾಶ್ಚಿಮಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ರಾಷ್ಟ್ರದ ಹಿತಾಸಕ್ತಿಯ ನೆಲೆಯಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಬಹುಪರಾಕ್ ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ: ಬಿಜೆಪಿ ಸರ್ಕಾರದ ವಿರುದ್ಧ ಎಚ್ ಡಿಕೆ ಕಿಡಿ
ಶುಕ್ರವಾರ (ಅಕ್ಟೋಬರ್ 28) ಲಾಹೋರ್ ನ ಲಿಬರ್ಟಿ ಚೌಕ್ ನಿಂದ ಇಸ್ಲಾಮಾಬಾದ್ ವರೆಗಿನ ಹಖೀಖಿ ಆಜಾದಿ ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ ಸಂದರ್ಭದಲ್ಲಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಭಾರತ ಉಕ್ರೇನ್ ಯುದ್ಧದ ನಡುವೆಯೂ ಪಾಶ್ಚಿಮಾತ್ಯ ದೇಶಗಳ ಒತ್ತಡವನ್ನು ಲೆಕ್ಕಿಸದೆ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದೆ. ಆದರೆ ಪಾಕಿಸ್ತಾನದ ಗುಲಾಮರು ದೇಶದ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಖಾನ್ ವಾಗ್ದಾಳಿ ನಡೆಸಿದ್ದಾರೆ.
ಒಂದು ವೇಳೆ ರಷ್ಯಾ ಕಡಿಮೆ ದರದಲ್ಲಿ ಇಂಧನ ಪೂರೈಸುವುದಾದರೆ, ನಾನು ನನ್ನ ದೇಶದ ಜನರನ್ನು ಉಳಿಸುವ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಗುಲಾಮ ಪಾಕಿಸ್ತಾನಿಯರು ಅದಕ್ಕೆ ಅವಕಾಶ ನೀಡಿಲ್ಲ. ನನಗೆ ಮುಕ್ತ ವಾತಾವರಣದ ಪಾಕಿಸ್ತಾನವನ್ನು ಎದುರು ನೋಡುತ್ತಿದ್ದು, ಜನರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಬೇಕಾದ ಅಗತ್ಯವಿದೆ ಎಂದು ಇಮ್ರಾನ್ ಖಾನ್ ತಿಳಿಸಿರುವುದಾಗಿ ವರದಿಯಾಗಿದೆ.
ಹಖೀಖಿ ಆಜಾದಿ ಪ್ರದೇಶದಿಂದ ಆರಂಭಿಸಿರುವ ಈ ಪಾದಯಾತ್ರೆಯ ಉದ್ದೇಶ ಒಂದೇ, ನಾವು ಈಗಾಗಲೇ ಬ್ರಿಟಿಷರಿಂದ ಸ್ವತಂತ್ರರಾಗಿದ್ದೇವೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಪಾಕಿಸ್ತಾನಿಯರಿಗೆ ಸಂದೇಶ ರವಾನಿಸುತ್ತಿದ್ದೇನೆ. ಇದೊಂದು ರಾಜಕೀಯ ಉದ್ದೇಶದ ಪಾದಯಾತ್ರೆಯಲ್ಲ, ಇದು ಚುನಾವಣೆ ಅಥವಾ ಧಾರ್ಮಿಕ ಉದ್ದೇಶದ ಯಾತ್ರೆಯಲ್ಲ. ಕೇವಲ ಸ್ವತಂತ್ರ ಪಾಕಿಸ್ತಾನದ ನಿರ್ಮಾಣವೇ ನನ್ನ ಉದ್ದೇಶವಾಗಿದೆ ಎಂದು ಖಾನ್ ತಿಳಿಸಿದ್ದಾರೆ.