ಲಕ್ನೋ: ದೀಪಾವಳಿ ಎಂದಾಕ್ಷಣ ನೆನಪಾಗುವುದೇ ದೀಪಗಳು ಹಾಗೂ ಪಟಾಕಿಗಳು. ಆದರೆ, ಉತ್ತರಪ್ರದೇಶದ ಲಕ್ನೋದಲ್ಲಿ ಈ ಬಾರಿಯ ವಿಶೇಷ ಏನು ಗೊತ್ತಾ? ಇಲ್ಲಿ ಸುಡುಮದ್ದುಗಳನ್ನು ಸುಡುವ ಹಾಗಿಲ್ಲ, ಬದಲಿಗೆ ತಿನ್ನಬೇಕು!
ಏಕೆಂದರೆ ಇಲ್ಲಿ ಸುಡುಮದ್ದುಗಳೆಲ್ಲ “ಸಿಹಿ’ಮದ್ದುಗಳಾಗಿ ಪ್ರತ್ಯಕ್ಷವಾಗಿವೆ! ಸುರು ಸುರು ಬತ್ತಿ ಹೋಗಿ ಸಿಹಿಸಿಹಿ ಬತ್ತಿಯಾಗಿಯೂ, ನೆಲಚಕ್ರ ಬರ್ಫಿಯಾಗಿಯೂ, ನಕ್ಷತ್ರ ಕಡ್ಡಿಯು ಚಾಕ್ಲೇಟ್ ಕಡ್ಡಿಯಾಗಿಯೂ ಬದಲಾಗಿದೆ. ಸಿಹಿತಿನಿಸಿನ ಅಂಗಡಿಗಳು ಹಾಗೂ ಬೇಕರಿಗಳಲ್ಲಿ ಇದನ್ನೆಲ್ಲ ನೋಡಿದ ಜನರು, “ಬೇಕರಿಗಳಲ್ಲೂ ಪಟಾಕಿ ಮಾರಲು ಶುರು ಮಾಡಿದರೋ’ ಎಂದು ಪ್ರಶ್ನಿಸುತ್ತಿದ್ದಾರಂತೆ.
ಹೌದು, ಲಕ್ನೋದ ಕೆಲವು ಖಾಸಗಿ ಉದ್ದಿಮೆದಾರರು, ಬೇಕರಿ ಅಂಗಡಿಯವರು, ಸಿಹಿತಿನಿಸಿನ ಮಳಿಗೆಯವರು ಸೇರಿ ಇಂಥದ್ದೊಂದು ಐಡಿಯಾವನ್ನು ಕಾರ್ಯಗತಗೊಳಿಸಿದ್ದಾರೆ. ಪ್ರತಿ ಬಾರಿಯ ಹಬ್ಬಕ್ಕೂ ಒಂದೇ ತೆರನಾದ ಬರ್ಫಿ, ರಸಗುಲ್ಲಾ, ಚಾಕ್ಲೇಟ್‌ಗಳನ್ನೇ ನೋಡಿ ಬೋರ್ ಆಗಿರುವ ಜನರಿಗೆ ವಿಭಿನ್ನ ಶೈಲಿಯ ತಿನಿಸುಗಳ ಮೂಲಕ ದೀಪಾವಳಿಯ ಖುಷಿ ಕೊಡೋಣ ಎಂದು ನಿರ್ಧರಿಸಿ, ಪಟಾಕಿಗಳನ್ನೇ ಹೋಲುವಂಥ ಸಿಹಿಖಾದ್ಯಗಳನ್ನು ತಯಾರಿಸಿದ್ದಾರೆ. ಈ “ತಿನ್ನುವ ಪಟಾಕಿ’ಗಳಿಗೀಗ ಭಾರೀ ಡಿಮ್ಯಾಂಡ್ ಉಂಟಾಗಿದ್ದು, ಜನರು ಖರೀದಿಗೆ ಮುಗಿಬೀಳುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.
ಬಿಳಿ ಚಾಕ್ಲೇಟ್ ಮತ್ತು ಟಾಫಿಯಿಂದ ಮಾಡಿದ ಸಟಿ ಬಾಂಬ್, ಚಾಕ್ಲೇಟ್‌ನಿಂದ ತಯಾರಿಸಿ ಸಿಲ್ವರ್ ಫಾಯಿಲ್ ಸುತ್ತಿರುವ ನಕ್ಷತ್ರ ಕಡ್ಡಿಗಳ ವ್ಯಾಪಾರವಂತೂ ಭರ್ಜರಿಯಾಗಿ ನಡೆಯುತ್ತಿದೆ. ಕಾರ್ಪೊರೇಟ್ ಕಂಪೆನಿಗಳು ಕೂಡ ಇವುಗಳನ್ನೇ ತಮ್ಮ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆಯಾಗಿ ನೀಡುತ್ತಿವೆ. ಆರೋಗ್ಯದ ದೃಷ್ಟಿಯಿಂದ ಸಕ್ಕರೆ ಅಂಶ ಕಡಿಮೆಯಿರುವ ಖಾದ್ಯಗಳನ್ನೂ ತಯಾರಿಸಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.