Advertisement

ಸ್ಕೈವಾಕ್‌ ಟೀಚರ್‌

09:44 AM Sep 05, 2019 | mahesh |

22 ವರ್ಷದ ಯುವತಿಯೊಬ್ಬಳಿಗೆ ತಾನು ಚೆನ್ನಾಗಿ ಸಂಪಾದಿಸಬೇಕು, ಉದ್ಯೋಗದಲ್ಲಿ ಬಡ್ತಿ ಪಡೆಯಬೇಕು, ಬದುಕನ್ನು ಎಂಜಾಯ್‌ ಮಾಡಬೇಕು… ಎಂಬಂಥ ವಯೋಸಹಜ ಕನಸುಗಳಿರುತ್ತವೆ. ಆದರೆ, ಇಲ್ಲೊಬ್ಬಳು ಹುಡುಗಿ ಕೊಳಗೇರಿಯ ಮಕ್ಕಳನ್ನು ಸಾಕ್ಷರರನ್ನಾಗಿಸುವ ಕನಸು ಕಂಡಿದ್ದಾಳೆ. ಅವರನ್ನೆಲ್ಲಾ ಒಂದೆಡೆ ಸೇರಿಸಿ, ತರಗತಿಗಳನ್ನೂ ನಡೆಸುತ್ತಿದ್ದಾಳೆ. ಅವಳ ಕ್ಲಾಸ್‌ರೂಮ್‌ ಇರುವುದೆಲ್ಲಿ ಗೊತ್ತಾ? ಪಾದಚಾರಿಗಳು ನಡೆಯುವ ಸ್ಕೈ ವಾಕ್‌ ಮೇಲೆ!

Advertisement

ಈ ಸ್ಕೈವಾಕ್‌ ಟೀಚರ್‌ನ ಹೆಸರು ಹೇಮಂತಿ ಸೇನ್‌. ಮುಂಬೈನ ಕಂಡೀವಾಲಿ ರೈಲ್ವೆ ನಿಲ್ದಾಣದ ಬಳಿಯ ಜನನಿಬಿಡ ಸ್ಕೈ ವಾಕ್‌ ಆಕೆಯ ತರಗತಿ. ಸುತ್ತಮುತ್ತಲಿನ ಕೊಳೆಗೇರಿಯ ಭಿಕ್ಷುಕರ ಮಕ್ಕಳೇ ಆಕೆಯ ವಿದ್ಯಾರ್ಥಿಗಳು. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಕಳೆದ ಒಂದು ವರ್ಷದಿಂದ ತರಗತಿ ನಡೆಯುತ್ತಿದೆ.

ಪ್ರತಿದಿನ ಅದೇ ದಾರಿಯಲ್ಲಿ ಓಡಾಡುತ್ತಿದ್ದ ಹೇಮಂತಿ ಸೇನ್‌, ಅಲ್ಲಿ ಭಿಕ್ಷೆ ಬೇಡುತ್ತಿದ್ದ, ಸುಮ್ಮನೆ ಅಲೆದಾಡುತ್ತಿರುತ್ತಿದ್ದ ಬಡ ಮಕ್ಕಳನ್ನು ಗಮನಿಸುತ್ತಿದ್ದಳು. ಅವರೆಲ್ಲ ಯಾರ ಮಕ್ಕಳು, ವಿದ್ಯಾಭ್ಯಾಸದ ಬಗ್ಗೆ ಅವರಿಗೆ ಅರಿವಿದೆಯಾ, ಅವರ ಮಂದಿನ ಭವಿಷ್ಯದ ಕತೆಯೇನು ಅಂತೆಲ್ಲಾ ಆಕೆಗೆ ಚಿಂತೆಯಾಗುತ್ತಿತ್ತು. ಈ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದಿದ್ದರೆ ಮುಂದೆ ಅವರೂ, ಭಿಕ್ಷುಕರೋ, ಕಿಸೆಗಳ್ಳರೋ ಆಗುತ್ತಾರಲ್ಲ ಅಂತ ದುಃಖವಾಗುತ್ತಿತ್ತು. ಹೇಗಾದರೂ ಮಾಡಿ ಅವರ ಮನವೊಲಿಸಿ ಶಾಲೆಗೆ ಸೇರಿಸಬೇಕು ಅಂತ ನಿರ್ಧರಿಸಿದಳು ಹೇಮಂತಿ. ಆ ಮಕ್ಕಳ ಕುಟುಂಬದವರನ್ನು ಭೇಟಿ ಮಾಡಿದರೆ, ಅವರಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಒಲವು ಕಾಣಿಸಲಿಲ್ಲ. ಹತ್ತಿರದ ಶಾಲೆಯವರೂ ಭಿಕ್ಷುಕರ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದರಂತೆ. ಭಿಕ್ಷುಕರ ಮಕ್ಕಳು, ದಿನಾ ತರಗತಿಗೆ ಬರುವುದಿಲ್ಲ, ಅವರನ್ನು ತಿದ್ದುವುದು ಕಷ್ಟ ಎಂಬುದು ಶಾಲೆಯವರ ವಾದ.

ಛಲ ಬಿಡದ ಹೇಮಂತಿ, ತಾನೇ ಟೀಚರ್‌ ಆಗಲು ನಿರ್ಧರಿಸಿಬಿಟ್ಟಳು. ಮಕ್ಕಳ ಮನವೊಲಿಸಿ, ಅವರ ಹೆತ್ತವರಿಗೆ ತಿಳಿ ಹೇಳಿ, ವಾರದಲ್ಲಿ ಮೂರು ದಿನ ಮಧ್ಯಾಹ್ನ ಪಾಠ ಹೇಳಿ ಕೊಡಲು ಪ್ರಾರಂಭಿಸಿದಳು. ತರಗತಿ ನಡೆಸಲು ಎಲ್ಲಿಯೂ ಸ್ಥಳ ಸಿಗದಿದ್ದಾಗ, ಜನರು ಓಡಾಡುವ ಸ್ಕೈ ವಾಕ್‌ ಸ್ಥಳವನ್ನೇ ಕ್ಲಾಸ್‌ ರೂಮ್‌ ರೀತಿ ಮಾಡಿಕೊಂಡರು. ಓದು-ಬರಹ ಅಷ್ಟೇ ಅಲ್ಲದೆ, ಡ್ಯಾನ್ಸ್‌, ಆರ್ಟ್‌, ಕ್ರಾಫ್ಟ್ ಕೂಡಾ ಕಲಿಸುತ್ತಾರೆ ಹೇಮಂತಿ ಟೀಚರ್‌!

ಕಳೆದ ಅಕ್ಟೋಬರ್‌ವರೆಗೆ ವಾರಕ್ಕೆ ಮೂರು ದಿನ ಮಾತ್ರ ನಡೆಯುತ್ತಿದ್ದ ತರಗತಿ, ಈಗ ಪ್ರತಿದಿನವೂ 1 ಗಂಟೆ ಕಾಲ ನಡೆಯುತ್ತದೆ. ಜುನೂನ್‌ ಎಂಬ ಎನ್‌ಜಿಓ ಸದಸ್ಯರು ಕೂಡಾ ಈ ಕೆಲಸದಲ್ಲಿ ಕೈ ಜೋಡಿಸಿದ್ದು, ವಾರಕ್ಕೊಮ್ಮೆ ಬೀದಿ ನಾಟಕಗಳ ಮೂಲಕ ಮಕ್ಕಳಿಗೆ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ. ಭಿಕ್ಷೆ ಬೇಡದೆ ತರಗತಿಗೆ ಹೋಗುವ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚುವ ಹೆತ್ತವರು, ದಾರಿಹೋಕರಿಗೆ ತೊಂದರೆಯಾಗುತ್ತಿದೆ ಅಂತ ದೂರು ನೀಡುವ ಜನರು… ಹೀಗೆ, ಹತ್ತು ಹಲವು ಅಡೆತಡೆಗಳನ್ನು ಮೀರಿ ಈ ಅಕ್ಷರ ಯಾತ್ರೆ ನಡೆಯುತ್ತಿದೆ.

Advertisement

ತರಗತಿಗೆ ಬರಲು ಶುರು ಮಾಡಿದ ನಂತರ ಮಕ್ಕಳಲ್ಲಿ ಸ್ವತ್ಛತೆಯಲ್ಲಿ ಅರಿವು, ನಡವಳಿಕೆಯಲ್ಲಿ ಬದಲಾವಣೆ, ನೆನಪಿನ ಶಕ್ತಿ ವೃದ್ಧಿಸುತ್ತಿದೆ ಅಂತಾರೆ ಹೇಮಂತಿ. ರೈಟ್‌ ಟು ಎಜುಕೇಷನ್‌ ಆ್ಯಕ್ಟ್ ಪ್ರಕಾರ, ಆ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡುವ ಉದ್ದೇಶ ಆಕೆಗಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಹೇಮಂತಿ ಟೀಚರ್‌ ಕೆಲಸಕ್ಕೊಂದು ಸಲಾಂ ಹೇಳ್ಳೋಣ.

Advertisement

Udayavani is now on Telegram. Click here to join our channel and stay updated with the latest news.

Next