ಕಾಳಗಿ: ಬಿಸಿಲು ನಾಡು ಕಲಬುರಗಿ ಜಿಲ್ಲೆಯನ್ನು ಕ್ಲೀನ್ ಕಲಬುರಗಿ ಗ್ರೀನ್ ಕಲಬುರಗಿ ಮಾಡಲು ನಾವೆಲ್ಲರು ಪಣ ತೊಡಬೇಕಾಗಿದೆ ಎಂದು ಜಿಲ್ಲಾಧಿ ಕಾರಿ ಉಜ್ವಲಕುಮಾರ ಘೋಷ್ ಹೇಳಿದರು. ಕೋರವಾರದ ಜವಾಹರ ನವೋದಯ ವಿದ್ಯಾಲಯದಲ್ಲಿ ಜಿಲ್ಲಾ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬೀಜದುಂಡೆ ತಯಾರಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರು ಭಾರತದ ನಾಗರಿಕನಾಗುವುದರ ಜತೆಗೆ ವಿಶ್ವ ಮಾನವರಾಗಬೇಕು ಮತ್ತು ಪರಿಸರ ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ನವೋದಯ ವಿದ್ಯಾಲಯದ ಮಕ್ಕಳು ಗ್ರೀನ್ ಕಲಬುರಗಿ ಮಾಡುವ ಉದ್ದೇಶದಿಂದ ಒಂದು ಲಕ್ಷ ನಲವತ್ತು ಸಾವಿರ ಬೀಜದುಂಡೆ ತಯಾರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಚಿಂಚೋಳಿ ತಾಲೂಕು ಕೊಂಚವರಂ ಅರಣ್ಯ ಪ್ರದೇಶದಲ್ಲಿ ಹಾಗೂ ವಿವಿಧ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಕಿ ಸಂರಕ್ಷಣೆ ಮಾಡಿ ಬೆಳಸಬೇಕು ಎಂದು ಹೇಳಿದರು. ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ ಮಾತನಾಡಿ, ಕಾಡಿನ ಮಹತ್ವ ಹಾಗೂ ಪರಿಸರದ ಕಾಳಜಿ ಜತೆಗೆ ಕಲಬುರಗಿ ಜಿಲ್ಲೆಯಲ್ಲಿರುವ ಕಾಡಿನ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಕಾಡುಗಳು ಉಳಿದರೆ ನಾವೆಲ್ಲರು ಉಳಿದಂತೆ. ಮುಂದಿನ ಪೀಳಿಗೆಗೆ ನಾವು ಕಾಡನ್ನು ಬೆಳೆಸಿ ಉಡುಗೊರೆಯಾಗಿ ನೀಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಯಾರಿಸಿದ ಒಂದು ಲಕ್ಷ ನಲವತ್ತು ಸಾವಿರ ಬೀಜದುಂಡೆಗಳನ್ನು ಜಿಲ್ಲಾಧಿಕಾರಿ ಘೋಷ್, ಅರಣ್ಯಾಧಿ ಕಾರಿ ಶಿವಶಂಕರ ಹಾಗೂ ಜಿಪಂ ಸಿಇಒ ಹೆಪ್ಸಿಬಾರಾಣಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಲಯದ ಪ್ರಾಚಾರ್ಯ ವಳ್ಳಿಯಮ್ಮೆ ಉಪಸ್ಥಿತರಿದ್ದರು. ಶಾಲೆ ಪಾಲಕ ಶಿಕ್ಷಕ ಸಮಿತಿ ಸದಸ್ಯರು ಹಾಗೂ ಅನೇಕರು ಹಾಜರಿದ್ದರು. ಉಪ ಪ್ರಾಚಾರ್ಯ ಒಬಳೇಶ್ವರ ಸ್ವಾಗತಿಸಿದರು. ಶಿಕ್ಷಕಿ ಗೀತಾ ಹಾಗೂ ಪ್ರಿಯಾ ನಿರೂಪಿಸಿದರು. ಶಿಕ್ಷಕ ರಾಮಚಂದ್ರ ಚವ್ಹಾಣ ವಂದಿಸಿದರು.