ಹಾನಗಲ್ಲ: ತಾಲೂಕಿನ ಕೆಲವು ಗ್ರಾಮಗಳಲ್ಲಿ 200 ಜಾನುವಾರುಗಳಿಗೆ ಚರ್ಮ ಗಂಟು (ಲಂಫಿ ಸ್ಕಿನ್ ಡಿಸೀಸ್) ರೋಗ ಕಾಣಿಸಿಕೊಳ್ಳುತ್ತಿದ್ದು, ತಾಲೂಕು ಪಶು ವೈದ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಿತ್ಯ ಬೆಳಿಗ್ಗೆ ವಿವಿಧ ಗ್ರಾಮಗಳಿಗೆ ತೆರಳಿ ರೋಗದ ವಿರುದ್ಧ ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ನಿಯಂತ್ರಣದಲ್ಲಿದ್ದು, ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ರೋಗ ಹೊಸದಾಗಿ ಕಾಣಿಸಿಕೊಳ್ಳುತ್ತಿದ್ದು, ವೈರಸ್‌ನಿಂದ ಹಸುಗಳು ಸೇರಿದಂತೆ ಎಲ್ಲ ಜಾನುವಾರುಗಳಿಗೆ ಬರುತ್ತದೆ. ಜಾನುವಾರುಗಳಿಗೆ ಕಚ್ಚುವ ನೊಣಗಳು ಹಾಗೂ ಉಣ್ಣೆಗಳಿಂದ ಮತ್ತು ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಈ ರೋಗ ಪ್ರಾಣಿಗಳಲ್ಲಿ ಹರಡುತ್ತದೆ. ಕೆಲವೊಮ್ಮೆ ಕಲುಷಿತ ನೀರು, ಮೇವಿನಿಂದಲೂ ಹರಡುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿಸಿದ್ದಾರೆ.
ತಾಲೂಕಿನಲ್ಲಿ ಅಧಿಕ ರಾಸುಗಳಿಗೆ ಈ ರೋಗ ಭೀತಿ ಎದುರಾಗುತ್ತಿದ್ದು, ಆರಂಭದಲ್ಲಿ ಪ್ರಾಣಿಗಳಲ್ಲಿ ಜ್ವರ ಕಾಣಿಸಿಕೊಂಡು ನಂತರ ಚರ್ಮದ ಮೇಲೆ ಗಂಟುಗಳಾಗಿ ಒಡೆದು ಗಾಯಗಳಾಗುತ್ತವೆ. ಇದರಿಂದ ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಎತ್ತು ಮತ್ತು ಹೋರಿಗಳಲ್ಲಿ ಹೂಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದಕಾರಣ ರೈತರು ಕೂಡಲೇ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಜಾನುವಾರು ಸಾಕಣೆ ಮಾಡುವವರು ಪಶು ವೈದ್ಯಾಧಿಕಾರಿಗಳ ಸಲಹೆ ಪಡೆಯುವುದು ಉತ್ತಮ ಎಂದು ಸೂಚಿಸಿದ್ದಾರೆ.
ಹಾನಗಲ್ಲ ತಾಲೂಕಿನ ಪಶುಪಾಲನಾ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ವಿವಿಧ ದರ್ಜೆಯ 21 ಪಶು ಚಿಕಿತ್ಸಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 20 ನೇ ಜಾನುವಾರು ಗಣತಿ ಅನುಸಾರ ತಾಲೂಕಿನಲ್ಲಿ ಒಟ್ಟು 56,739 ದನ, 11,782 ಎಮ್ಮೆ, 23,050 ಕುರಿ, 17,505 ಮೇಕೆಗಳಿವೆ. ಹಾನಗಲ್ಲ ತಾಲೂಕು ಪಶು ಸಂಸ್ಥೆಯವರು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಲ್ಲದೆ, ಆರೋಗ್ಯ ರಕ್ಷಣೆ, ವಿಮಾ ಸೌಲಭ್ಯ ಮತ್ತು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಮಾಡುತ್ತಿವೆ. ವಾರದಲ್ಲಿ ನಾಲ್ಕು ದಿನ ತಾಲೂಕಿನ ನಿಗ ಪಡಿಸಿದ ಗ್ರಾಮಗಳಿಗೆ ಭೇಟಿ ಕೊಟ್ಟು ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಂಚಾರಿ ಚಿಕಿತ್ಸೆಯೂ ಕೂಡ ಜಾರಿಯಲ್ಲಿದೆ. ರೈತರು, ಜಾನುವಾರು ಹಾಗೂ ಸಾಕಣೆದಾರರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಿ.ಎಂ.ಉದಾಸಿ ಕರೆ ನೀಡಿದ್ದಾರೆ.