Advertisement

ಹಿಮ್ಮಡಿ ಬಿರುಕಿಗೆ ಮನೆಮದ್ದು; ಚರ್ಮರೋಗ ನಿರ್ಲಕ್ಷಿಸದಿರಿ

06:31 PM Jan 07, 2023 | Team Udayavani |

ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು ರೀತಿಯಲ್ಲಿ ಚರ್ಮ ಸಂಬಂಧಿ ರೋಗಗಳನ್ನು ಕಾಣಬಹುದಾಗಿದೆ. ಇದಕ್ಕೆ ಅಗತ್ಯವಾಗಿ ವೈದ್ಯರ ಸಲಹೆ ಸಹಿತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಈ ಬಗೆಗಿನ ಪೂರಕ ಮಾಹಿತಿಯನ್ನು ಈ ಲೇಖನ ತಿಳಿಸುತ್ತದೆ.

Advertisement

ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗುತ್ತಿದ್ದು, ಇದು ಅನೇಕ ತರಹದ ಚರ್ಮ ರೋಗಗಳಿಗೆ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಕೂಡ ಚರ್ಮ ರೋಗ ಭೀತಿ ಎದುರಾಗಿದೆ. ಯಾವುದೇ ರೀತಿಯ ಚರ್ಮರೋಗ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.

ಚರ್ಮರೋಗಗಳ ಸಾಲಿನಲ್ಲಿ ಹಿಮ್ಮಡಿ ಬಿರುಕು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಹಿಮ್ಮಡಿ ಬುಡ ಅಥವಾ ಹೊರ ತುದಿಯ ಚರ್ಮ ಗಟ್ಟಿಯಾದಾಗ ಹಿಮ್ಮಡಿ ಬಿರುಕು ಉಂಟಾಗುತ್ತದೆ. ಈ ಬಿರುಕಿನಲ್ಲಿ ವಿಪರೀತವಾಗಿ ನೋವು ಇರುತ್ತದೆ. ಕೆಲವೊಂದು ಬಾರಿ ಇದರಿಂದ ರಕ್ತ ಸುರಿಯುವ ಸಾಧ್ಯತೆಯಿದೆ. ಚಳಿಗಾಲದಲ್ಲಂತೂ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ನೆಲದಲ್ಲಿ ಸರಿಯಾಗಿ ನಿಲ್ಲಲು, ವೇಗವಾಗಿ ನಡೆಯಲು ಕಷ್ಟವಾಗುತ್ತದೆ.

ಅನೇಕ ಮಂದಿಗೆ ಉರಿ ಬಿಸಿಲಿಗೆ ಚರ್ಮದಲ್ಲಿ ತುರಿಕೆ ರೋಗ ಕಾಣಿಸಿಕೊಳ್ಳುತ್ತದೆ. ಪ್ರತೀ ದಿನ ಕಿರಿ ಕಿರಿ ಎನಿಸುವ ಕಾಯಿಲೆಗಳಲ್ಲಿಯೂ ಇದು ಮುಖ್ಯವಾದುದು. ಸಾಮಾನ್ಯವಾಗಿ ಮನುಷ್ಯನಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಈ ರೋಗ ಹರಡುವ ಸಾಧ್ಯತೆ ಕೂಡ ಹೆಚ್ಚಿದೆ. ರೋಗಾಣುಗಳ ಹರಡುವಿಕೆಯಿಂದ ಈ ಕಾಯಿಲೆ ಬರುತ್ತಿದೆ. ಕೆಲವೊಂದು ಬಾರಿ ಸೊಳ್ಳೆ ಕಡಿತದಿಂದ ಸಾಮಾನ್ಯ ತುರಿಕೆ ಶುರುವಾಗಿ ಅದು ಬೇಸಗೆ ಬಿಸಿಗೆ ದೊಡ್ಡ ಕಜ್ಜಿಯಾಗುವ ಸಾಧ್ಯತೆಯೂ ಇದ್ದು, ಚರ್ಮದ ಕಾಯಿಲೆಯಾಗಿ ಮಾರ್ಪಡಾಗಬಹುದು.

ಸ್ಕೇಬಿಸ್‌ ಅಥವಾ ತುರಿಕೆಕಜ್ಜಿ ಎನ್ನುವ ಚರ್ಮದ ವ್ಯಾಧಿಯು ಸಾರ್ಕೋಫಿಸ್ಟ್‌ ಸ್ಕೇಬಿಯೈ ಎಂದು ಕರೆಯಲ್ಪಡುವ ಪರಾವಲಂಬಿ ಜೀವಿಯಿಂದ ಬರುತ್ತದೆ. ತುರಿಕೆಕಜ್ಜಿ ಜೋರಾಗಿ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹೀಗಿದ್ದಾಗ ಕೂಡಲೇ ಚರ್ಮಕ್ಕೆ ಸಂಬಂಧಿತ ಚರ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. ಕೆಲವೊಂದು ಮನೆ ಮದ್ದಿನಿಂದಲೂ ಚರ್ಮ ರೋಗವನ್ನು ಕಡಿಮೆ ಮಾಡಬಹುದು. ಆಲೂಗಡ್ಡೆಯನ್ನು ಲಿಂಬೆ ರಸದೊಂದಿಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿಕೆ ಕಜ್ಜಿ ನಿಯಂತ್ರಣಕ್ಕೆ ಬರುತ್ತದೆ.

Advertisement

ಚರ್ಮದ ಆರೈಕೆಯ ಬಗ್ಗೆ ಪ್ರತಿಯೊಬ್ಬರೂ ಗಮನ ನೀಡಬೇಕು. ಚರ್ಮದ ರಕ್ಷಣೆಗೆ ಹೆಚ್ಚಾಗಿ ತಂಬು ತೋಳಿನ ಅಂಗಿಗಳನ್ನು ಧರಿಸಿ. ಚರ್ಮಕ್ಕೆ ಹೊಂದಿಕೊಳ್ಳುವ ಮಾಯಿಷÒರ್‌ ಕ್ರೀಮ್‌ಗಳನ್ನು ಸ್ನಾನದ ಬಳಿಕ ಲೇಪಿಸುವುದು ಮುಖ್ಯ. ಮಲಗುವುದಕ್ಕೂ ಮುನ್ನ ತೆಂಗಿನ ಎಣ್ಣೆಯನ್ನು ಕೈ,ಕಾಲುಗಳಿಗೆ ಲೇಪಿಸಿ ಮಲಗಿಕೊಳ್ಳಿ, ಹಣ್ಣುಗಳನ್ನು ಸೇವಿಸಿ, ಹೆಚ್ಚಾಗಿ ನೀರು ಸೇವಿಸಿರಿ.

ನಿರ್ಲಕ್ಷಿಸಬೇಡಿ
ಬೇಸಗೆ ಕಾಲ ಸಮೀಪಿಸುತ್ತಿದ್ದು, ಚರ್ಮ ರೋಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ತುಂಬಾನೇ ಜಾಗರೂಕತೆಯಿಂದ ಇರಬೇಕು. ಯಾವುದೇ ರೀತಿಯ ಚರ್ಮ ರೋಗದ ಲಕ್ಷಣಗಳು ಕಂಡುಬಂದರೆ ಸಮೀಪದ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಬದಲಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
– ಡಾ| ರಾಜೇಶ್ವರೀ ದೇವಿ, ವೆನಲಾಕ್ ಆಸ್ಪತ್ರೆ ಅಧೀಕ್ಷಕಿ

ಹಿಮ್ಮಡಿ ಬಿರುಕಿಗೆ ಮನೆಮದ್ದು
ಹಿಮ್ಮಡಿ ಬಿರುಕುವಿಗೆ ಮನೆಯಲ್ಲಿಯೇ ಮದ್ದು ಮಾಡಬಹುದು. ಬಿಸಿ ನೀರಿನಲ್ಲಿ ಚರ್ಮವನ್ನು ಅದ್ದಿಟ್ಟು, ಒರಟು ಕಲ್ಲಿನಲ್ಲಿ ಹಿಮ್ಮಡಿ ಸðಬ್‌ ಮಾಡಿ. ಅನಂತರ ಕಾಲನ್ನು ಸರಿಯಾಗಿ ಒರಸಿಕೊಳ್ಳಿ, ಒಡೆದಿರುವ ಹಿಮ್ಮಡಿಗೆ ಹರಳೆಣ್ಣೆ ಬಿಟ್ಟು ಕೆಲವು ಗಂಟೆಗಳ ಕಾಲ ಹಾಗೇ ಇರಲಿ. ಕೆಲವು ದಿನಗಳ ಕಾಲ ಈ ರೀತಿ ಮಾಡಿದರೆ ಹಿಮ್ಮಡಿ ಒಡೆಯುವ ಸಮಸ್ಯೆಯಿಂದ ಮುಕ್ತಿ ಸಿಗಬಹುದು.

ಬೇಸಗೆಯಲ್ಲಿ ಚರ್ಮ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತವೆ. ಬೆವರಿದ ಪ್ರದೇಶದಲ್ಲಿ ಗಾಳಿಯಾಡದಿದ್ದಾಗ ಬೆವರು ಗುಳ್ಳೆಗಳಾಗುತ್ತವೆ. ಇದಕ್ಕೆ ಸಮರ್ಪಕ ಆರಾಮದಾಯಕ ಬಟ್ಟೆ ತೊಡುವುದೇ ಪರಿಹಾರ ಎನ್ನಬಹುದು. ಸೊಳ್ಳೆ ಕಡಿತ, ಹುಳ ಹುಪ್ಪಟೆಗಳ ಕಡಿತದಿಂದಲೂ ಚರ್ಮದ ಸಮಸ್ಯೆ ಹೆಚ್ಚಾಗುತ್ತವೆ. ಕಡಿತಗಳು ಗಾಯ ಮಾಡುತ್ತವೆ. ಇವುಗಳಿಂದ ಬಚಾವಾಗಲು ಸುರಕ್ಷೆಯೊಂದೇ ಉಪಾಯವಾಗಿದೆ. ಆದಷ್ಟು ಕೀಟಗಳ ಕಡಿತದಿಂದ ಪಾರಾಗುವ ಪರಿಹಾರಗಳತ್ತ ಗಮನ ನೀಡಿ. ಕೀಟ ಕಡಿತ ತಡೆಯುವ ಕ್ರೀಮ್‌ಗಳನ್ನು ಬಳಸಿ. ಮಲಗುವ ಮುನ್ನ ಸೊಳ್ಳೆ ನಿವಾರಣೆಯ ಕ್ರಮಗಳನ್ನು ಅನುಸರಿಸಿ. ಸೊಳ್ಳೆ ಪರದೆಯನ್ನು ಬಳಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next