Advertisement

Hepatitis A; ಮಕ್ಕಳಲ್ಲಿ ಹೆಚ್ಚುತ್ತಿವೆ ಹೆಪಟೈಟಿಸ್ ಎ ಪ್ರಕರಣಗಳು: ತಡೆಗಟ್ಟುವ ವಿಧಾನವೇನು?

04:01 PM Sep 21, 2023 | Team Udayavani |

ಹೆಪಟೈಟಿಸ್ ಎ ವೈರಸ್ (ಎಚ್‌ಎವಿ) ಯಕೃತ್ತಿನ ಉರಿಯೂತದ ಕಾಯಿಲೆಯಾದ ಹೆಪಟೈಟಿಸ್ ಎ ಗೆ ಕಾರಣವಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ಯಂತ ಹೆಪಟೈಟಿಸ್ ಎ ದೀರ್ಘಕಾಲದ ಯಕೃತ್ತಿನ ಕಾಯಿಲೆಗೆ ಕಾರಣವಾಗುವುದಿಲ್ಲ. ಆದಾಗ್ಯೂ, ಇದು ದುರ್ಬಲಗೊಳಿಸುವ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಕೆಲವೊಮ್ಮೆ ಮಾರಣಾಂತಿಕವಾದ ಪುಲ್ಟಿನಂಟ್ ಹೆಪಟೈಟಿಸ್ (ಕ್ಷಿಪ್ರಗತಿಯ ಪಿತ್ತಜನಕಾಂಗದ ವೈಫಲ್ಯ) ಅನ್ನು ಕೂಡ ಉಂಟುಮಾಡಬಹುದು.

Advertisement

ಹೆಪಟೈಟಿಸ್ ಎ ರೋಗಲಕ್ಷಣಗಳನ್ನು ತೋರಿಸಬಹುದು ಅಥವಾ ತೋರಿಸದೇ ಇರಬಹುದು. ರೋಗಲಕ್ಷಣ ತೋರಿಸುವ ಪ್ರಕರಣಗಳಲ್ಲಿ, ಪ್ರಾಯೋಗಿಕವಾಗಿ ಇದು ಜ್ವರ, ಅಸ್ವಸ್ಥತೆ, ಹಸಿವಿನ ಕೊರತೆ, ಅತಿಸಾರ, ವಾಕರಿಕೆ, ಹೊಟ್ಟೆ ನೋವು, ಕಪ್ಪು ಮೂತ್ರ ಮತ್ತು ಕಾಮಾಲೆ (ಚರ್ಮ ಮತ್ತು ಕಣ್ಣುಗಳ ಹಳದಿ ಬಣ) ಸೇರಿದಂತೆ ಸೌಮ್ಯದಿಂದ ಹಿಡಿದು ತೀವ್ರವಾದ ರೋಗಲಕ್ಷಣಗಳೊಂದಿಗೆ ಇರುತ್ತದೆ.

ರೋಗ ಹರಡುವಿಕೆ

ಎಚ್‌ಎವಿ 10 ವರ್ಷದೊಳಗಿನ ಮಕ್ಕಳಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ರೋಗವು ಸಾಮಾನ್ಯವಾಗಿ ಮಲ ಅಥವಾ ಬಾಯಿಯ ಮಾರ್ಗದ ಮೂಲಕ ಹರಡುತ್ತದೆ. ಇದು ಸೋಂಕಿತ ಮತ್ತು ಲಸಿಕೆ ಪಡೆಯದ ವ್ಯಕ್ತಿಯು ಕಲುಷಿತ ಆಹಾರ ಅಥವಾ ನೀರನ್ನು ಸೇವಿಸಿದಾಗ ಆಗುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಬೀದಿ ಬಳಿಯ ಕುರುಕುಲು ತಿಂಡಿಗಳನ್ನು ಸೇವಿಸಲು ಇಚ್ಛಿಸುತ್ತಾರೆ, ಈ ತಿಂಡಿಗಳು ಸಾಮಾನ್ಯವಾಗಿ ಕರಿದ, ಮಸಾಲೆಯುಕ್ತ ಪದಾರ್ಥಗಳಾಗಿರುತ್ತವೆ. ಇಂತಹ ಆಹಾರಗಳನ್ನು ಅಸುರಕ್ಷಿತ ನೀರು, ಮರುಬಳಿಸಿದ ಎಣ್ಣೆಯಲ್ಲಿ ತಯಾರಿಸಲಾಗುತ್ತವೆ. ಅಲ್ಲದೆ ಹೆಚ್ಚಾಗಿ ಶುಚಿಯಿರದ ಸ್ಥಳಗಳಲ್ಲಿ ನೀಡಲಾಗುತ್ತದೆ. ಬೀದಿಯಲ್ಲಿ ಸಿಗುವ ಆಹಾರಗಳು ಸಾಮಾನ್ಯವಾಗಿ, ತಿನ್ನಲು ಹೆಚ್ಚು ಆರೋಗ್ಯಕರವಿರುವುದಿಲ್ಲ. ಇವು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸಬಹುದು. ಇದರ ಜೊತೆಗೆ, ಒದ್ದೆ ಮತ್ತು ತೇವ ಹೊಂದಿರುವ ಮಳಗಾಲದ ಹವಾಮಾನವು ಇದು ಅನಾರೋಗ್ಯದ ಅಪಾಯವನ್ನು ಹಾಗೂ ರೋಗಾಣುಗಳ ಸಂತಾನ ಉತ್ಪತ್ತಿಗೆ ಸೂಕ್ತವಾಗಿದೆ, ಇದು ಅನಾರೋಗ್ಯದ ಅಪಾಯವನ್ನು ಹಾಗೂ ಎಚ್‌ಎವಿ ಯ ಪಕರಣಗಳನ್ನು ಹೆಚ್ಚಿಸುತ್ತದೆ.

ಅನೈರ್ಮಲ್ಯ ಪರಿಸರದಲ್ಲಿ ವಾಸಿಸುವವರಿಗೆ, ಶುದ್ಧ ನೀರನ್ನು ಕುಡಿಯದವರಿಗೆ, ವೈಯಕ್ತಿಕ ನೈರ್ಮಲ್ಯವನ್ನು ಕಡೆಗಣಿಸುವವರಿಗೆ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಮನೆಯಲ್ಲಿ ಇರುವವರಿಗೆ ಎಚ್‌ಎವಿ ತಗಲುವ ಅಪಾಯವಿರುತ್ತದೆ. ವಯಸ್ಕರು ಮಾದಕ ವ್ಯಸನದ ಮೂಲಕ ಮತ್ತು ಸಾಂಕ್ರಾಮಿಕ ವ್ಯಕ್ತಿಯೊಂದಿಗೆ ದೈಹಿಕ (ಲೈಂಗಿಕ) ಸಂಪರ್ಕದ ಮೂಲಕ ಅದನ್ನು ಪಡೆಯುವ ಸಾಧ್ಯತೆಯಿದೆ.

Advertisement

ಚಿಕಿತ್ಸೆ ಏನು?

ಹೆಪಟೈಟಿಸ್ ಎ ಯನ್ನು ರೋಗಲಕ್ಷಣವನ್ನು ನೋಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಏಕೆಂದರೆ ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳು ಕಡಿಮೆಯಾಗಲು ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು. ಕ್ರಮೇಣವಾಗಿ ರೋಗಿ ಚೇತರಿಸಿಕೊಳ್ಳಬಹುದು. ಪೌಷ್ಟಿಕಾಂಶ ಇರುವ ಆಹಾರ ತಿನ್ನುವುದು ಮತ್ತು ಸಾಕಷ್ಟು ಶುದ್ಧ ನೀರನ್ನು ಕುಡಿಯುವುದು ಮತ್ತು ದ್ರವ ಪದಾರ್ಥ ತೆಗೆದುಕೊಳ್ಳುವುದು ಚೇತರಿಕೆಯ ಸಮಯದಲ್ಲಿ ಬಹುಮುಖ್ಯವಾಗಿದೆ.

ತಡೆಗಟ್ಟುವ ವಿಧಾನ:

ಹೆಪಟೈಟಿಸ್ ಎ ತಡೆಗಟ್ಟುವ ಅತ್ಯುತ್ತಮ ಕ್ರಮಗಳೆಂದರೆ ಹೆಪಟೈಟಿಸ್ ಎ ಲಸಿಕೆಯನ್ನು ಪಡೆಯುವುದು, ಕಲುಷಿತ ಆಹಾರವನ್ನು ತಿನ್ನದಿರುವುದು, ಶುದ್ಧ ನೀರು ಕುಡಿಯುವುದು, ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಹೆಚ್ಚಿಸುವುದು ಮತ್ತು ಪೀಡಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು.

ಡಾ. ರಾಜೀವ್ ಲೋಚನ್, ಲೀಡ್ ಕನ್ನಲೆಂಟ್ ಎಚ್ ಪಿ ಬಿ ಮತ್ತು ಲಿವರ್ ಟ್ರಾನ್ಸ್‌ ಪ್ಲಾಂಟೇಶನ್ ಸರ್ಜರಿ, ಮಣಿಪಾಲ್ ಆಸ್ಪತ್ರೆ ಹಳೆ ಎರ್‌ಪೋರ್ಟ್ ರಸ್ತೆ.

Advertisement

Udayavani is now on Telegram. Click here to join our channel and stay updated with the latest news.

Next