ಹುಬ್ಬಳ್ಳಿ: ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು ಐಬಿಎಂಆರ್ ಕಾಲೇಜಿನ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಹೇಳಿದರು.
ವಿದ್ಯಾನಗರ ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್, ಕಾಲೇಜು ಶಿಕ್ಷಣ ಇಲಾಖೆ, ಜಿಟಿಟಿಸಿ, ಐಬಿಎಂಆರ್ ಕಾಲೇಜು ಹಾಗೂ ವಿಜಯಲಕ್ಷ್ಮೀ ಗೇರ್ ಕಂಪನಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಕಾಲೇಜುಗಳಲ್ಲಿ ಕೊನೆಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ಆಯೋಜಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳು ವ್ಯಾಸಂಗ ಮುಗಿಯುವಷ್ಟರಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಭೀಮಪ್ಪ ಎನ್.ಎಂ. ಮಾತನಾಡಿ, ಉದ್ಯೋಗ ಮೇಳದಲ್ಲಿ 1580 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಅವರಲ್ಲಿ 345 ಜನರನ್ನು ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿತ್ತು. 127 ಜನರು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಸುಮಾರು 51 ಕಂಪನಿಗಳು ಮೇಳದಲ್ಲಿ ಭಾಗಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡವು ಎಂದು ತಿಳಿಸಿದರು.
ಧಾರವಾಡದ ಸರಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ರವೀಂದ್ರ ದ್ಯಾಬೇರಿ, ವಿಜಯಲಕ್ಷ್ಮೀ ಗೇರ್ ಅಧ್ಯಕ್ಷ ಎಸ್.ವಿ. ಪುರೋಹಿತ, ಜಿಟಿಟಿಸಿ ನಿರ್ದೇಶಕ ಮಾರುತಿ ಭಜಂತ್ರಿ ಮೊದಲಾದವರಿದ್ದರು. ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ರವಿ ಎ.ಎನ್. ಸ್ವಾಗತಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ| ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಸಾಂಖಿಕ ಅಧಿಕಾರಿ ಅಕ್ಕಮ್ಮ ಶೆಟ್ಟರ ನಿರೂಪಿಸಿದರು. ಅಭಿಯಾನ ವ್ಯವಸ್ಥಾಪಕ ಡಾ| ರವಿ ಮುನವಳ್ಳಿ ವಂದಿಸಿದರು.