ಬೆಂಗಳೂರು: ಕೆಳ ಹಂತ ಸೇರಿ ಉನ್ನತ ಮಟ್ಟದ ಉದ್ಯೋಗದಲ್ಲಿ ಇರುವವರಿಗೂ ಕೌಶಲ್ಯ ತುಂಬುವ ಮ್ಯಾನೇಜಮೆಂಟ್ ಕೋರ್ಸ್‌ಗಳ ಪಠ್ಯಕ್ರಮವನ್ನು ಶಿಕ್ಷಣ ಸಂಸ್ಥೆಗಳು ರೂಪಿಸಿ ಕೇಂದ್ರ ಸರ್ಕಾರಕ್ಕೆ ನೀಡಿದ್ದರೆ, ಅದನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಗುರುವಾರ ಎಂ.ಎಸ್.ರಾಮಯ್ಯ ಆರೋಗ್ಯ ಸೇವಾವಲಯ ಕೌಶಲ್ಯ ತರಬೇತಿ ಕೇಂದ್ರ (ಎಚ್‌ಎಸ್‌ಎಸ್‌ಸಿ) ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ರೀತಿಯ ವೃತ್ತಿಗೂ ಕೌಶಲ್ಯ ತುಂಬುವ ಕೆಲಸ ಆಗಬೇಕಿದೆ. ಅಧಿಕ ಅಂಕ ಮತ್ತು ವಿವಿಧ ಪದವಿ, ಕೋರ್ಸ್‌ಗಳ ಪ್ರಮಾಣ ಪತ್ರದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ.
ಶಿಕ್ಷಣದ ಜತೆಗೆ ಕೌಶಲ್ಯವೂ ಅತಿ ಮುಖ್ಯವಾಗಿದೆ. ಕೆಳ ಹಂತದ ವೃತ್ತಿಯಿಂದ ಹಿಡಿದು ಉನ್ನತ ಮಟ್ಟದ ವೃತ್ತಿ ಸೇರಿ ಎಲ್ಲಾ ವಲಯದಲ್ಲೂ ಕೌಶಲ್ಯ ವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಸೇವೆ ಅತ್ಯಗತ್ಯವಾಗಿದೆ ಎಂದರು.
ಕೋರ್ಸ್‌ಗಳ ಮೂಲಕ ಕೌಶಲ್ಯ ತುಂಬುವ ಜತೆಗೆ ಜೀವನಕ್ಕೆ ಬೇಕಾದ ಮೃದು ಕೌಶಲತೆ, ಸೇವಾ ಕೌಶಲ್ಯ, ಮಾನಸಿಕ ಕೌಶಲ್ಯವನ್ನು ಕಲಿಸುವ ಅಗತ್ಯವಿದೆ. ಭಾರತೀಯತೆಯ ಮೂಲ ತತ್ವವನ್ನು ಮರೆತು, “ನಾನು ಭಾರತೀಯ’ ಎಂದು ಹೇಳುವುದಕ್ಕಿಂತ ನಮ್ಮಲ್ಲಿನ ಸಂಪನ್ಮೂಲವನ್ನು ಬಳಸಿಕೊಂಡು ಭಾರತೀಯರಾಗಿ ಬಾಳುವುದೇ ಶ್ರೇಷ್ಠ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ಎಚ್‌ಎಸ್‌ಎಸ್‌ಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಶಿಶ್ ಜೈನ್, ಎಚ್‌ಎಸ್‌ಎಸ್‌ಸಿ ರಾಜ್ಯಾಧ್ಯಕ್ಷ ಡಾ.ಅಲೆಗಾÕಂಡರ್, ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.