ಧಾರವಾಡ: ಕೌಶಲ್ಯ ಅಭಿವೃದ್ಧಿ ತರಬೇತಿಗಳು ವಿದ್ಯಾರ್ಥಿಯ ವೃತ್ತಿ ಜೀವನದ ಪ್ರಗತಿಗೆ ರಹದಾರಿಗಳಾಗುತ್ತವೆ ಎಂದು ಜೆಎಸ್‌ಎಸ್ ಸಂಸ್ಥೆಯ ವಿತ್ತಾಧಿಕಾರಿ ಡಾ| ಅಜಿತ ಪ್ರಸಾದ ಹೇಳಿದರು. ನಗರದ ಶ್ರೀ ಮಂಜುನಾಥೇಶ್ವರ ಐಟಿಐನಲ್ಲಿ ಡಾಯ್ ಫೌಂಡೇಶನ್‌ನವರ ಸಿಎಸ್‌ಆರ್ ಯೋಜನೆಯಡಿ ಬೆಂಗಳೂರಿನ ಸ್ಕೈಡರ್ ಕಂಪನಿಯ ಪ್ರಾಯೋಜಕತ್ವದಲ್ಲಿ ಪ್ರಾರಂಭವಾಗುತ್ತಿರುವ ವಿದ್ಯಾರ್ಥಿಗಳ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಪಾವಧಿ ಮತ್ತು ದೀರ್ಘಾವಧಿ ಗುಣಮಟ್ಟದ ಕೌಶಲ್ಯ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿ ಬೇರೆ ಉದ್ಯೋಗಾವಕಾಶಕ್ಕಾಗಿ ಕಾಯದೇ ಸ್ವ-ಉದ್ಯೋಗ ತಾನೇ ಸೃಷ್ಟಿಸಿಕೊಳ್ಳುತ್ತಾನೆ ಎಂದರು.
ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಜನರಿಗೆ ಸಾಮಾಜಿಕ-ಆರ್ಥಿಕ ಸಮಾನತೆ, ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಶೈಕ್ಷಣಿಕ, ಧಾರ್ಮಿಕ, ಉದ್ಯೋಗ, ಆರೋಗ್ಯ, ಮಹಿಳಾ ಸಬಲೀಕರಣ ವಿಚಾರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ತಾಂತ್ರಿಕ ಶಿಕ್ಷಣವು ಸಹ ಅವರ ಕನಸಿನ ಕೂಸು. ಹೀಗಾಗಿ ರುಡ್‌ಸೆಟ್, ಐಟಿಐಗಳನ್ನು, ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಟೂಲ್‌ಕಿಟ್ ವಿತರಿಸಿದ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ತಾಂತ್ರಿಕ ಶಿಕ್ಷಣ ಎಂದರೆ ತಾಂತ್ರಿಕತೆಯ ಬಗ್ಗೆ ಕ್ರಿಯಾತ್ಮಕ ರೂಪದಲ್ಲಿ ನೀಡುವ ಶಿಕ್ಷಣ. ಇದರಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗೆ ಅವಶ್ಯವಿರುವ ತರಬೇತಿಯನ್ನು ಪಡೆದು ಮುಂದೆ ಕೈಗಾರಿಕೆಗಳಲ್ಲಿ ಕೆಲಸಗಳನ್ನು ಸಹ ಮಾಡಬಹುದು ಅಥವಾ ಅದೇ ಕೈಗಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಥವಾ ಕೈಗಾರಿಕೆಗೆ ಬೇಕಾಗುವ ಪೂರಕ ಕೆಲಸಗಳನ್ನು ಸಹ ಮಾಡುವಷ್ಟು ಪ್ರಬುದ್ಧರಾಗುತ್ತಾರೆ. ಹೀಗಾಗಿ ಐಟಿಐ ಕಲಿಯುವಾಗಲೇ ಇಂತಹ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದಲ್ಲಿ ಅವರು ಬೇರೆಯವರಿಗೂ ಉದ್ಯೋಗ ಕೊಡುವಷ್ಟು ಬೆಳೆಯಬಹುದು ಎಂದರು.
ನಿಟ್ಟೆ ಅಟಲ್ ಇನ್ಕ್ಯೂಬೇಶನ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಎ.ಪಿ.ಆಚಾರ್ ಮಾತನಾಡಿ, ಐಟಿಐನಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ಪ್ರಾಯೋಗಿಕವಾಗಿ ದೊರೆಯುತ್ತದೆ. ಅದರೊಟ್ಟಿಗೆ ಈ ರೀತಿ ತರಬೇತಿಗಳು ಅವರನ್ನು ಕೌಶಲ್ಯ ಭರಿತರನ್ನಾಗಿ ಮಾಡುತ್ತವೆ. ಜೆಎಸ್ ಎಸ್ ಸಂಸ್ಥೆ ಹಲವಾರು ತರಬೇತಿಗಳನ್ನು ಆಯೋಜಿಸಿ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಅಣಿಗೊಳಿಸುತ್ತಿದೆ ಎಂದು ಹೇಳಿದರು.
ಡಾಯ್ ಫೌಂಡೇಶನ್‌ನ ಸ್ಥಾಪಕ ಜಗದೀಶ್ ನಾಯಕ್ ಮಾತನಾಡಿ, ಸ್ಕೈಡರ್ ಕಂಪನಿಯವರು ನೀಡಿದ ಈ ತರಬೇತಿ ಕೇಂದ್ರದ ಉದ್ದೇಶ ವಿದ್ಯಾರ್ಥಿಗಳಿಗೆ ಕಲಿಯುತ್ತಿರುವಾಗಲೇ ಇಲೆಕ್ಟ್ರಿಕಲ್ ತಾಂತ್ರಿಕ ತರಬೇತಿಯನ್ನು ನೀಡಿ ಅವರೊಂದಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ 90 ದಿನಗಳ ಕಾಲ ಐಟಿಐ ವಿದ್ಯಾರ್ಥಿಗಳಿಗೆ ಡೊಮೆಸ್ಟಿಕ್, ಇಂಡಸ್ಟ್ರಿಯಲ್, ಕಮರ್ಶಿಯಲ್ ಹಾಗೂ ಮನೆಯ ವಾಯರಿಂಗ್, ಹೋಮ್ ಅಪ್ಲಾಯನ್ಸಸ್ ರಿಪೇರಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುವುದು. ಈ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಟೂಲ್ ಕಿಟ್‌ಗಳನ್ನು ಸಹ ನೀಡುವುದರ ಜತೆಗೆ ತರಬೇತಿಯ ನಂತರ ಪ್ರಮಾಣ ಪತ್ರ ವಿತರಿಸಿ, ಉದ್ಯೋಗ ದೊರಕಿಸಿ ಕೊಡಲಾಗುವದು ಎಂದರು.
ಜೆಎಸ್ಸೆಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಡಾಯ್ ಫೌಂಡೇಶನ್‌ನ ಶಿಲ್ಪಾ ಕಡಕೋಳ, ಮಹೇಶ ಕುಂದರಪಿಮಠ, ವಿಕಾಸ ಬಿಳಗಿಕರ್, ಸುಕನ್ಯಾ ಗುಮ್ಮಗೋಳಮಠ ಇದ್ದರು.