Advertisement
ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಉಪದೇಶ. ನಮ್ಮ ದೇಶವು ಹಿಂದಿನಿಂದಲೂ ಜ್ಞಾನಕ್ಕೆ ಹೆಸರಾದುದು. ಇಲ್ಲಿನ ಅಧ್ಯಾತ್ಮ ಸಂಪತ್ತು ವಿಶ್ವಕ್ಕೇ ಮಾದರಿ. ಪ್ರಾಚೀನ ಕಾಲದಿಂದಲೂ ಈ ಜ್ಞಾನ ವಾಹಿನಿ ಮಾನವನ ಎದೆಯಿಂದ ಎದೆಗೆ ಹರಿದು ಬಂದಿದೆ.
Related Articles
Advertisement
ಈ ಕಥೆಯ ಆಶಯ ನಮ್ಮ ಪ್ರಾಚೀನರಲ್ಲಿ ಅದ್ಭುತವಾದ ನೆನಪಿನ ಶಕ್ತಿಯ ಕೌಶಲವಿತ್ತು. ಕಂಠದಲ್ಲಿಯೇ ಸಾವಿರಾರು ಪುಟಗಳಷ್ಟನ್ನು ಸೆರೆ ಹಿಡಿದುಕೊಳ್ಳುವ ಶಕ್ತಿ ಇದ್ದಿತ್ತು. ನಮ್ಮ ಜಾನಪದ ಸಾಹಿತ್ಯವನ್ನೇ ತೆಗೆದು ಕೊಂಡರೂ ಇದು ಮನವರಿಕೆಯಾಗುತ್ತದೆ. ನೂರಾರು ಪಾಡªನಗಳು, ಹಾಡುಗಳು ನಮ್ಮ ಹಿರಿಯರಿಗೆ ಕಂಠಸ್ಥ. ಇತ್ತೀಚಿನವರೆಗೂ ಯಕ್ಷಗಾನ ಭಾಗವತರಲ್ಲಿ ಪ್ರಸಂಗ ನೋಡಿ ಪದ ಹೇಳುವ ಕ್ರಮವಿರಲಿಲ್ಲ. ಹಿಂದಿನ ಕೆಲವು ಭಾಗವತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಂತೆ. ನಾವು ಪುಸ್ತಕದ ಭಾಗವತರಲ್ಲ, ಮಸ್ತಕದ ಭಾಗವತರು ಎಂದು.
ಅಕ್ಷರ ಪರಂಪರೆ: ಕಂಠಸ್ಥ ಪರಂಪರೆಯ ಮುಂದಿನ ಹೆಜ್ಜೆಯಾಗಿ ಬರೆವಣಿಗೆ ಬೆಳಕಿಗೆ ಬಂತು. ಅವುಗಳನ್ನು ಅಕ್ಷರ ರೂಪದಲ್ಲಿ ಸೆರೆ ಹಿಡಿ ಯುವ ಪ್ರಯತ್ನ. ಈ ಹಂತದಲ್ಲಿ ಲಿಪಿ ಶಾಸ್ತ್ರವು ಸಾಕಷ್ಟು ಬೆಳೆದಿತ್ತು. ಕಲ್ಲಿನ ಮೇಲೆ, ತಾಮ್ರದ ಮೇಲೆ ಆರಂಭವಾದ ಬರೆವಣಿಗೆ ಸ್ಥಾನದಲ್ಲಿ ಮುಂದೆ ತಾಳೆಗರಿ ತಲೆದೋರಿತು. ಕವಿ ಹಾಗೂ ಲಿಪಿಕಾರ ಎಂಬ ಪರಿಕಲ್ಪನೆಗಳು ಬೆಳೆದುಬಂದವು. ಮಹಾಭಾರತವನ್ನು ಬರೆದವನು ಗಣಪತಿ. ಅದನ್ನು ನಿರೂಪಿಸುತ್ತಾ ಸಾಗಿದವನು ವ್ಯಾಸಮಹರ್ಷಿ. ಕುಮಾರವ್ಯಾಸ ಭಾರತದಲ್ಲೂ ಕವಿ ಹಾಗೂ ಲಿಪಿಕಾರ ಉಲ್ಲೇಖಗಳಿವೆ. ಕುಮಾರವ್ಯಾಸನೇ ಒಂದು ಕಡೆ ಹೇಳುವಂತೆ ತಾನು ಲಿಪಿಕಾರ, ಗದುಗಿನ ವೀರನಾರಾಯಣನೇ ಕವಿ. ಪ್ರಾಚೀನ ಕಾವ್ಯದ ಮೂಲಕ ವಿವಿಧ ವಿಚಾರಗಳನ್ನು ಸೆರೆ ಹಿಡಿಯುವ ಕವಿಗೆ ಪ್ರಬಲವಾದ ಆತ್ಮವಿಶ್ವಾಸ ಮುಖ್ಯ. ಅನೇಕ ಹಳಗನ್ನಡ ಕವಿಗಳಲ್ಲಿ ಈ ಆತ್ಮವಿಶ್ವಾಸ ಕೆಲವೊಮ್ಮೆ ಅತಿಯಾಗಿ ಕಂಡರೂ ಅಚ್ಚರಿ ಪಡಬೇಕಾಗಿಲ್ಲ. ರನ್ನನು ತನ್ನ ಕೃತಿಯನ್ನು ವಿಮರ್ಶಿಸುವವನಿಗೆ ಎಂಟೆದೆ ಬೇಕು ಎನ್ನುತ್ತಾ ತಾನು ವಾಗೆವಿಯ ಭಂಡಾರ ಮುದ್ರೆಯನ್ನು ಒಡೆದೆನೆಂದು ಹೇಳುತ್ತಾನೆ. ಪೊನ್ನನಂತೂ ಕಾಳಿದಾಸನಿಗಿಂತ ನಾಲ್ವಡಿ ತಾನೆನ್ನುತ್ತಾನೆ. ಆದರೆ ಬರೆವಣಿಗೆಯ ಸಿದ್ಧಿ ತನಗೊಲಿದ ಪರಿಯನ್ನು ಕುಮಾರವ್ಯಾಸ ಹೇಳುವ ರೀತಿ ವಿಶಿಷ್ಟವಾದುದು. ಹಲಗೆ ಬಳಪವ ಪಿಡಿಯದ ಅಗ್ಗಳಿಕೆ ಎನ್ನುತ್ತಾನೆ. ತಾಳೆಗರಿಯಲ್ಲಿ ಬರೆಯುವಾಗ ತಪ್ಪಾಗದಂತೆ ಎಚ್ಚರ ಅಗತ್ಯ. ಹಾಗೇನಾದರೂ ಬರೆವಣಿಗೆಯಲ್ಲಿ ಎಡವಿದರೆ ತಾಳೆಗರಿಯೇ ವ್ಯರ್ಥವಾಗುವ ಸಾಧ್ಯತೆಗಳಿದ್ದವು. ಹಾಗಾಗಿ ಮೊದಲು ಹಲಗೆ ಬಳಪವನ್ನು ಬಳಸಿ ಮಾದರಿ ಪಠ್ಯವನ್ನು ತಯಾರಿಸಿಕೊಳ್ಳುವ ಕ್ರಮವಿತ್ತು. ಆದರೆ ಕುಮಾರವ್ಯಾಸನಿಗೆ ಹಲಗೆ ಬಳಪವ ಹಿಡಿಯುವ ಅಗತ್ಯವೇ ಇಲ್ಲ. ಬರೆವಣಿಗೆಯ ಮೇಲೆ ಅಷ್ಟು ಹಿಡಿತ.
ನೇರವಾಗಿ ತಾಳೆಗರಿಯಲ್ಲಿಯೇ ಬರೆಯುವಷ್ಟು ಭಾಷಾಪ್ರೌಢಿಮೆ ಮತ್ತು ಆತ್ಮವಿಶ್ವಾಸ. ಒಮ್ಮೆ ಒಂದು ಪದ ಬಳಸಿದರೆ ಅದನ್ನು ಬದಲಾಯಿಸುವ ಪ್ರಶ್ನೆಯೇ ಆತನ ಬರೆವಣಿಗೆಯ ಶೈಲಿಯಲ್ಲಿಲ್ಲ. ಅಷ್ಟು ನಿಖರತೆ. ಬೇರೆಯವರ ರೀತಿಯನ್ನು ನಕಲು ಮಾಡುವ ಅಭ್ಯಾಸವೇ ತನಗಿಲ್ಲ ಎನ್ನುತ್ತಾ ಕಂಠಪತ್ರದ ಉಲುಹು ಕೆಡದ ಅಗ್ಗಳಿಕೆ ಎನ್ನುತ್ತಾನೆ. ಉಲುಹು ಎಂದರೆ ನಾದ. ಪತ್ರ ಎಂದರೆ ತಾಳೆಗರಿ. ಕಂಠ ಎಂದರೆ ಬರೆಯುವ ಸಾಧನ. ಬರೆವಣಿಗೆಯಲ್ಲಿ ಆ ನಾದದ ಓಟ ಅಷ್ಟು ಸುಂದರ. ಭಾಮಿನಿಯಲ್ಲಿ ನಿರರ್ಗಳವಾಗಿ ಬರೆದುಕೊಂಡು ಸಾಗುವ ಕೌಶಲ. ಇಂಥ ಬಲುಹು ವೀರನಾರಾಯಣನ ಕಿಂಕರನಾದ ತನ್ನದು ಎಂಬಲ್ಲಿ ಅಷ್ಟೇ ವಿನಯವಂತಿಕೆಯನ್ನೂ ಪ್ರದರ್ಶಿಸುತ್ತಾನೆ. ಸಾಹಿತ್ಯದ ಯಾವುದೇ ಪ್ರಕಾರವಿರಲಿ, ಅದರಲ್ಲಿ ಸರಾಗವಾಗಿ ಬರೆಯುವ ವಿಶೇಷ ಕೌಶಲ ನಮ್ಮ ಹಿರಿಯರಿಗೆ ಸಿದ್ಧಿಸಿತ್ತು. ಹಾಗಾಗಿಯೇ ನಮ್ಮ ಅಂದಿನ ಕವಿಗಳ, ವಚನಕಾರರ, ದಾಸರ, ಸರ್ವಜ್ಞನ ಮತ್ತು ಹಳ್ಳಿಗರ ಅನೇಕ ಸಾಹಿತ್ಯಗಳು ಕಾಲದಂಚಿನಲ್ಲಿ ತೇಲಿ ಹೋಗದೆ ಮತ್ತೆ ಮತ್ತೆ ಜನಮಾನಸದಲ್ಲಿ ಜೀವವನ್ನು ಪಡೆಯುತ್ತಿವೆ.
ಇದು ಕಂಪ್ಯೂಟರ್ ಯುಗ. ಎಲ್ಲೆಡೆ ಡಿಜಿಟಲ್ ಕ್ರಾಂತಿ. ಕೈ ಬರೆವಣಿಗೆ ಮರೆತೇ ಹೋಗುವಷ್ಟು ದೂರ ಸಾಗುತ್ತಿದೆ. ಜ್ಞಾನ ಸಂರಕ್ಷಣೆಗೂ ನೂರಾರು ತಂತ್ರಜ್ಞಾನ ಮಾರ್ಗಗಳಿವೆ. ಇದರ ನಡುವೆಯೂ ನಮ್ಮಲ್ಲಿ ಹಸ್ತಪ್ರತಿಯ ಸಂಗ್ರಹದ ಹವ್ಯಾಸ, ಶಾಸನಗಳ ಓದು, ವಾಚನ ಹಾಗೂ ಪ್ರವಚನ ಮುಂದುವರಿಯುತ್ತಿದೆ. ಅವುಗಳಿಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶವಾಗುತ್ತಿದೆ. ಎಷ್ಟೇ ಬದಲಾಗಲಿ. ನಮ್ಮ ಹಿರಿಯರು ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಅಂದಿನ ದಿನಗಳಲ್ಲಿ ಪಟ್ಟ ಶ್ರಮ ಇಂದಿಗೂ ಸ್ಮರಣೀಯ.
-ಡಾ| ಶ್ರೀಕಾಂತ್ ಸಿದ್ದಾಪುರ