Advertisement

ಉದ್ಯೋಗಕ್ಕೆ ತಕ್ಕಂತೆ ಕೌಶಲಾಭಿವೃದ್ಧಿ: ಸಹಸ್ರಬುದ್ಧೆ  ಕರೆ

01:23 PM Jan 18, 2018 | |

ಉಡುಪಿ: ಕೈಗಾರಿಕೆಗಳಿಗೆ ಅಗತ್ಯವಿರುವಂತೆ ವಿದ್ಯಾರ್ಹತೆ ಪಡೆದವರಿಗೆ ಉದ್ಯೋಗಾರ್ಹತೆ ನೀಡುವ ಕೌಶಲ ರೂಪಿಸಬೇಕಾದ ಅಗತ್ಯವಿದೆ  ಎಂದು ಅ.ಭಾ. ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ| ಅನಿಲ್‌ ಡಿ. ಸಹಸ್ರಬುದ್ಧೆ ಹೇಳಿದರು.

Advertisement

ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಮತ್ತು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಶ್ರಯದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಾಪಕರ ದಿನಾಚರಣೆಯಲ್ಲಿ 35ನೇ ಟಿ.ಎ. ಪೈ ಸ್ಮಾರಕ ಉಪನ್ಯಾಸ ನೀಡಿದ ಅವರು, ಪ್ರಸ್ತುತ ದೇಶದ ಒಟ್ಟು ದೇಶೀಯ ಉತ್ಪನ್ನ ಶೇ. 6-7 ಇದೆ. ಇದು ಶೇ. 10ಕ್ಕೆ ಏರುವಂತಾಗಲು ಉದ್ಯೋಗಾರ್ಹತೆಯನ್ನು ಹೆಚ್ಚಿಸಬೇಕಾಗಿದೆ ಎಂದರು.

ಯುವಕರ ಉಪಯೋಗ ಯಾವಾಗ?
18ರಿಂದ 59 ವರ್ಷದೊಳಗಿನವರು ಶೇ. 65, 25ಕ್ಕಿಂತ ಕೆಳಗಿನವರು ಶೇ. 52 ಇದ್ದಾರೆ. ಇದೊಂದು ವರ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಈಗ ಶೇ.25 ಇದೆ. ಇದೇ ಪ್ರಮಾಣ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. 35, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.50, ಇನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ. 65 ಇದೆ. ಅಬ್ದುಲ್‌ ಕಲಾಂ ಅವರು 2020ರಲ್ಲಿ ಈ ಪ್ರಮಾಣ ಶೇ. 30ಕ್ಕೆ ಏರಬೇಕೆಂದು ಹೇಳುತ್ತಿದ್ದರು. ಇನ್ನು 5-10 ವರ್ಷಗಳಲ್ಲಿ ಶೇ. 35 ಏರುವುದು ಕಷ್ಟವಲ್ಲ. ಇದೇ ವೇಳೆ ಕೌಶಲ ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಯುವ ಸಂಪನ್ಮೂಲವೂ ಪ್ರಯೋಜನಕ್ಕೆ ಬಾರದೆ ಹೋದೀತು ಎಂದು ಸಹಸ್ರಬುದ್ಧೆ ಕಳವಳ ವ್ಯಕ್ತಪಡಿಸಿದರು. 

 ಚತುಃಕೌಶಲ
ಮಾತನಾಡುವ, ಬರೆಯುವ ಕೌಶಲವಲ್ಲದೆ ಓದುವುದು, ಆಲಿಸುವ ಕೌಶಲದ ಅಗತ್ಯವೂ ಇದೆ. ಹೆಚ್ಚು ಹೆಚ್ಚು ಅಂಶಗಳನ್ನು ತ್ವರಿತವಾಗಿ ಓದಿ ನಿರ್ಧಾರ ತಳೆಯುವುದೂ ಮುಖ್ಯ. ಇನ್ನೊಬ್ಬರ ವಿಷಯಗಳನ್ನು ಆಲಿಸುವುದೂ ಕೂಡ ಕೌಶಲವೇ ಎಂದು ಸಹಸ್ರಬುದ್ಧೆ ಹೇಳಿದರು. 

ನೀತಿ ಓದಿಗಿಂತ ಜಾರಿ ಮುಖ್ಯ
ವಿವಿಧ ಕ್ಷೇತ್ರದ ವಿದ್ಯಾರ್ಥಿಗಳನ್ನು ಒಂದು ಯೋಜನೆಗೆ ಒಳಪಡಿಸಿ ತಂಡ ಸ್ಫೂರ್ತಿಯಿಂದ ಕೆಲಸ ಮಾಡುವಂತೆ ತರಬೇತಿ ಕೊಡುವುದೂ ಮುಖ್ಯ. ನೈತಿಕ ಶಿಕ್ಷಣ, ತರಬೇತಿ ಅತಿ ಅಗತ್ಯವಾಗಿದೆ. ನೀತಿಯನ್ನು ಓದುವುದರಿಂದ ಪ್ರಯೋಜನವಿಲ್ಲ, ಅದರ ಅನುಷ್ಠಾನ ಅಗತ್ಯ. ಈಗ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವುದರಿಂದ ಸ್ವಯಂ ಕಲಿಕೆ ಅಗತ್ಯವಾಗಿದೆ ಎಂದರು. ಶಿಕ್ಷಣವು ಕೈಗೆಟಕುವ ದರದಲ್ಲಿ ಸಿಗಬೇಕು. ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ವಾಯತ್ತವಾಗ ಬೇಕು. ಆಗಲೇ ಇವುಗಳಿಗೆ ಉತ್ತರದಾಯಿತ್ವ ಸಿಗುತ್ತದೆ. ಇಂಗ್ಲೆಂಡ್‌ನ‌ಲ್ಲಿ ಸಂಯೋಜಿತ (ಅಫಿಲಿಯೇಟೆಡ್‌) ಶಿಕ್ಷಣ ವ್ಯವಸ್ಥೆ ಹೋದರೂ ಬ್ರಿಟಿಷರು ಆಳಿದ ಭಾರತ, ಪಾಕಿಸ್ಥಾನ, ಬಾಂಗ್ಲಾ, ಶ್ರೀಲಂಕಾದಲ್ಲಿ ಇನ್ನೂ ಇದೆ ಎಂದು ಹೇಳಿದರು.

Advertisement

ಅಧ್ಯಕ್ಷತೆಯನ್ನು ಟ್ಯಾಪ್ಮಿ ಆಡಳಿತ ಮಂಡಳಿ ಸದಸ್ಯ ಡಾ| ಎಚ್‌.ಎಸ್‌.ಬಲ್ಲಾಳ್‌ ವಹಿಸಿದ್ದರು. ನಿರ್ದೇಶಕ ಪ್ರೊ| ಮಧು ವೀರ ರಾಘವನ್‌ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಸೀನಾ ಬಿಜು ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next