Advertisement

ಶಾಮ್‌ಸುಂದರ್‌ ಕೊಲೆಗೆ 3 ತಿಂಗಳ ಹಿಂದೆ ಸ್ಕೆಚ್‌

10:08 AM Sep 30, 2019 | Suhan S |

ಧಾರವಾಡ : ತಾಲೂಕಿನ ಸಲಕಿನಕೊಪ್ಪದ ಬಳಿ ದಾಂಡೇಲಿಯ ಶ್ಯಾಮ್‌ಸುಂದರ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯದ ಪೊಲೀಸ್‌ ಮಹಾನಿರೀಕ್ಷಕ ಎಚ್‌.ಜಿ.ಆರ್‌.ಸುಹಾಸ ಹೇಳಿದರು.

Advertisement

ನಗರದ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ರವಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಂಡೇಲಿಯ ಸುಬ್ರಮಣ್ಯ ಸಮರೂ (39), ರಾಜೇಶ ರುದ್ರಪಾಟಿ (33), ಗೌರೀಶ ಸುಳ್ಳದ (29), ಉಮೇಶ ಎಸ್‌. (39) ಬಂಧಿತರು. ಈ ಪೈಕಿ ಸುಬ್ರಮಣ್ಯನೇ ನಾಡಪಿಸ್ತೂಲ್‌ನಿಂದ ಶ್ಯಾಮಸುಂದರ್‌ಗೆ ಗುಂಡಿಕ್ಕಿದ್ದು, ರಾಜೇಶ ಪಿಸ್ತೂಲ್‌ ಪೂರೈಸಿದಾತ. ಇದು ಹಳೆಯ ರಾಜಕೀಯ ವೈಷಮ್ಯ, ಕೆಲ ಗಲಾಟೆಗಳ ಹಿನ್ನೆಲೆಯಲ್ಲಿ ಈ ಕೊಲೆ ಆಗಿದ್ದು, ಕೊಲೆಯಾದ 72 ಗಂಟೆಯೊಳಗೆ ನಾವು ರಚಿಸಿದ್ದ 7 ತನಿಖಾ ತಂಡಗಳು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ ಎಂದರು.

ಸೆ.25 ರಂದು ಬೆಳಿಗ್ಗೆ ದಾಂಡೇಲಿಯಿಂದಲೇ ಬೈಕ್‌ ಮೇಲೆ ಬಂದಿದ್ದ ಸುಬ್ರಮಣ್ಯ, ಗೌರೀಶ, ಉಮೇಶ ಬೆನ್ನಟ್ಟಿಕೊಂಡು ಬಂದಿದ್ದು, ಕೊಲೆ ಮಾಡಿದ ಬಳಿಕ ಕಲಘಟಗಿಗೆ ತೆರಳಿ ಅಲ್ಲಿ ಬಟ್ಟೆ ಬದಲಿಸಿದ್ದರು.

ಇದಲ್ಲದೇ ದಾಡಿ, ಕಟಿಂಗ್‌ ಮಾಡಿಸಿಕೊಂಡು ಚಹರೆ ಬದಲಾಯಿಸಿಕೊಂಡು ಮತ್ತೆ ದಾಂಡೇಲಿಗೆ ಬಂದು ಸೇರಿದ್ದರು. ಈ ಆರೋಪಿಗಳು ಬಳಸಿದ್ದ ಬೈಕ್‌, ಕಾರು ವಶಪಡಿಸಿಕೊಂಡಿದ್ದು, ಕೊಲೆಗೆ ಬಳಸಿರುವ ನಾಡ ಪಿಸ್ತೂಲ್‌ ಇನ್ನಷ್ಟೇ ಪತ್ತೆ ಹಚ್ಚಿ ವಶಪಡಿಸಿಕೊಳ್ಳಬೇಕಿದೆ ಎಂದರು.

ಎಲ್ಲ ಆರೋಪಿಗಳ ಮೇಲೆ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಿಲ್ಲ. ರಾಜಕೀಯ ವೈಷಮ್ಯ, ಅಕ್ಕಪಕ್ಕದ ಮನೆಯ ಜಗಳಗಳು ವೈಯಕ್ತಿಕ ವೈಷಮ್ಯಕ್ಕೆ ಕಾರಣವಾಗಿತ್ತು. ಹೀಗಾಗಿ ರಾಜೇಶ ಹಾಗೂ ಕೊಲೆಯಾದ ಶ್ಯಾಮಸುಂದರ ಕುಟುಂಬ ಮಧ್ಯೆ ಗಲಾಟೆಗಳು ಆಗಿದ್ದವು. ಈ ಮಧ್ಯೆಹಣದ ಅಡಚಣೆಯಲ್ಲಿದ್ದ ಉಳಿದ ಆರೋಪಿಗಳಿಗೆ ರಾಜೇಶ ಹಣ ಸಹಾಯ ಮಾಡಿದ್ದ. ಈ ವೇಳೆ ಕೊಲೆಗೂ ಮುನ್ನ 2-3 ತಿಂಗಳ ಹಿಂದೆ ಶ್ಯಾಮಸುಂದರ್‌ನ ಕೈ-ಕಾಲು ಮುರಿಯಲು ಪ್ಲಾನ್‌ ಹಾಕಲಾಗಿತ್ತು. ಆದರೆ ಕೊನೆಗೆ ರಾಜೇಶನ ಅಣತಿಯಂತೆ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಎರಡು ಟೆಕ್ನಿಕಲ್‌ ತಂಡ ಸೇರಿ ಒಟ್ಟು 7 ತಂಡಗಳನ್ನು ಪ್ರಕರಣದ ಪತ್ತೆ ಹಚ್ಚಲು ರಚಿಸಲಾಗಿತ್ತು. ಈ ತಂಡಗಳು ದಾಂಡೇಲಿಯಲ್ಲಿ ಮೊಕ್ಕಾಂ ಹೂಡಿ, ಕಾರು ಬೆನ್ನಟ್ಟಿದ ಬೈಕ್‌ ಸೆರೆ ಆಗಿರುವ ಸಿಸಿ ಕ್ಯಾಮರಾ ಪರಿಶೀಲಿಸಿತ್ತು. ಈ ಪರಿಶೀಲನೆಯಲ್ಲಿ ಬೈಕ್‌ ಮೇಲೆ ಹೊರಟಿದ್ದ ಮೂವರು ಕಂಡು ಬಂದಿದ್ದರೆ ನಮ್ಮ ಇಲಾಖೆಯ 70 ಜನ ಸಿಬ್ಬಂದಿಗಳ ದಾಂಡೇಲಿ ಭಾಗದಲ್ಲಿ ಮಾಹಿತಿ ಕಲೆ ಹಾಕಿತ್ತು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ವರ್ತಿಕ ಕಟಿಯಾರ್‌, ಡಿವೈಎಸ್‌ಪಿ ರಾಮನಗೌಡ ಹಟ್ಟಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next