ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಎದುರಿನ ಕೂಗಳತೆ ದೂರದಲ್ಲಿರುವ ಚರಂಡಿ ಸ್ವಚ್ಚಗೊಳಿಸುವಾಗ ವ್ಯಕ್ತಿಯ ಅಸ್ಥಿ ಪಂಜರ ಪತ್ತೆಯಾಗಿದ್ದು, ಎರಡು ವರ್ಷಗಳ ಹಿಂದೆಯೇ ಕೊಲೆ ಮಾಡಿ ಮೃತ ದೇಹವನ್ನು ಗೋಣಿ ಚೀಲದಲ್ಲಿ ಮುಚ್ಚಿಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಂಚಾರ ಠಾಣೆಯಿಂದ ಸುಮಾರು 50 ಮೀ. ದೂರದಲ್ಲೇ ಎಚ್‌ಬಿಆರ್ ಕಲ್ಯಾಣ ಮಂಟಪ ಇದ್ದು, ನಾಲ್ಕು ವರ್ಷ ಗಳ ಹಿಂದೆ ಚರಂಡಿ ಮೇಲೆ ಕಲ್ಲುಗಳನ್ನು ಹಾಕಿ ಕಾಮಗಾರಿ ನಡೆಸಲಾಗಿತ್ತು. ಚರಂಡಿಯೊಳಗೆ ಕಸ ತುಂಬಿಕೊಂಡು ನೀರು ಮುಂದೆ ಸಾಗುತ್ತಿರಲಿಲ್ಲ. ಹೀಗಾಗಿ ಸೋಮವಾರ ಮಧ್ಯಾಹ್ನ ಬಿಬಿಎಂಪಿ ಸಿಬ್ಬಂದಿ ಚರಂಡಿ ಸ್ವಚಗೊಳಿಸಲು ಕಲ್ಲುಗಳನ್ನು ತೆಗಯುತ್ತಿದ್ದಾಗ ಅಸ್ಥಿ ಪಂಚರ ಪತ್ತೆಯಾಗಿದೆ.
ಇದನ್ನೂ ಓದಿ:ಅಮೇರಿಕಾಕ್ಕೆ ಕಳಂಕವಾಗಿರುವ ಬೃಹತ್ ಕಾರಾಗೃಹ “ಗ್ವಾಂಟನಾಮೊ ಬೇ” ಶಾಶ್ವತ್ ಬಂದ್ …!?
ಕೂಡಲೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ವಿಜಯನಗರ ಪೊಲೀಸರು, ಅಸ್ಥಿ ಪಂಜರವನ್ನು ಪರಿಶೀಲಿಸಿದಾಗ ಕಳೆದ 2 ವರ್ಷಗಳ ಹಿಂದೆ ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿನಿಮೀಯ ರೀತಿಯಲ್ಲಿ ಮೃತದೇಹವನ್ನು ಪೊಲೀಸ್ ಠಾಣೆಯ ಸಮೀಪದ ಚಂರಡಿಯಲ್ಲಿ ಹೂತು ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೀಗ ಪ್ರಕರಣದ ಜಾಡು ಭೇದಿಸಲು ಹೊರಟಿರುವ ಪೊಲೀಸರು ಈ ಹಿಂದೆ ಚರಂಡಿ ನಿರ್ಮಾಣ ಮಾಡಿದ ವರಿಂದ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಅಸ್ಥಿ ಪಂಜರ ಪತ್ತೆಯಾಗಿರುವ ಸ್ಥಳದಲ್ಲಿ ಯಾವುದೇ ವಾಸನೆ ಕೂಡ ಬಂದಿಲ್ಲ. ಮೇಲ್ನೋಟಕ್ಕೆ ಬೇರೆಡೆಯಿಂದ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಡಿಎನ್ಎ ಪರೀಕ್ಷೆ
ಅಸ್ಥಿ ಪಂಜರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಅಸ್ಥಿ ಪಂಜರದ ಡಿಎನ್‌ಐ ಹಾಗೂ ಅಸ್ಥಿ ಪಂಜರ ಸಿಕ್ಕ ಸ್ಥಳದಲ್ಲಿನ ಮಣ್ಣನ್ನು ಕೂಡ ಸಂಗ್ರಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ನಾಲ್ಕು ವರ್ಷಗಳಿಂದ ಇದುವರೆಗೆ ನಾಪತ್ತೆಯಾಗಿರುವ ಎಲ್ಲ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಜತೆಗೆ ಆ ಚಹರೆ ಹೊಂದುವ ವ್ಯಕ್ತಿಯ ಪರಿಚಯಸ್ಥರ ವಿಚಾರಣೆ ನಡೆಸುತ್ತೇವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದರು.