ಬೆಂಗಳೂರು: ಮೊದಲ ಸಂಗೀತ ಸಂಜೆ ಕಾರ್ಯಕ್ರಮವನ್ನು ನೀಡಿ ಸಾಂಸ್ಕೃತಿಕ ನಗರಿ ಮೈಸೂರಿನ ಅಭಿಮಾನಿಗಳನ್ನು ಮನಸೂ ರೆಗೈದಗಾನ ಕೋಗಿಲೆ ಎಸ್. ಜಾನಕಿ, 65 ವರ್ಷಗಳ ಬಳಿಕ ಅದೇ ನಗರದಶ್ರೋತೃಗಳ ಮುಂದೆ ತಮ್ಮ ಗಾನಪಯಣಕ್ಕೆ ವಿದಾಯ ಹೇಳಲಿದ್ದಾರೆ.
ಇದೇ ತಿಂಗಳ 28ರಂದು ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಜಾನಕಿ ಅವರು ತಮ್ಮ ಜೀವನದ ಕೊನೆಯ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಗಾಯನ ಜೀವನದಿಂದ ನಿವೃತ್ತಿ ಘೋಷಿಸಿದ್ದರು.”ನನಗೀಗ ವಯಸ್ಸಾಗಿದೆ. ಮೇಲಾಗಿ, ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸಿದರೆ ಉತ್ತಮ ಎಂದೆನಿಸಿದೆ. ಹಾಗಾಗಿ, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮ” ಎಂದು ಜಾನಕಿ ಹೇಳುತ್ತಾರೆ.
ಕಳೆದ ವರ್ಷ ಮಲಯಾಳಂನ “ಪತು ಕಲ್ಪನಾಕಳ್’ ಚಿತ್ರದಲ್ಲಿ “ಅಮ್ಮಾಪೂವಿನುಂ’ ಎಂಬ ಹಾಡು ಅವರ ಸಿನಿ ಗಾಯನದ ಕೊನೆಯ ಹಾಡು. ಆ ಮೂಲಕ, ಅವರ ಕೊನೆಯ ಹಾಡಿನ ಗೌರವ ಮಲಯಾಳಂ ಚಿತ್ರರಂಗದ ಪಾಲಾಗಿತ್ತು. ಇದೀಗ, ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮದ ಗೌರವ ಕರ್ನಾಟಕಕ್ಕೆ ಸಂದಿದೆ. ಕುತೂಹಲದ ವಿಚಾರವೆಂದರೆ, ಕರ್ನಾಟಕದಲ್ಲಿ ಎಸ್.ಜಾನಕಿ ನೀಡಿದ ಮೊಟ್ಟ ಮೊದಲ ಸಂಗೀತ ಸಂಜೆ ಕಾರ್ಯಕ್ರಮ ಮೈಸೂರಿನಲ್ಲೇ ನಡೆದಿತ್ತು. 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಈ ಕಾರ್ಯಕ್ರಮದಲ್ಲಿ ಜಾನಕಿ ಅವರು ಪಿ.ಬಿ. ಶ್ರೀನಿವಾಸ್ ಜತೆ ಹಾಡಿದ್ದರು. ಇದೀಗ, ಕಾಕತಾಳೀಯವೆಂಬಂತೆ, ಮೈಸೂರಿನಲ್ಲೇ ಅವರ ಕೊನೆಯ ಕಾರ್ಯಕ್ರಮವೂ ನಡೆಯುತ್ತಿದೆ.
ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿರುವ ಆಯೋಜಕರಲ್ಲೊಬ್ಬರಾದ ನವೀನ್, “”ನಾನು ಎಸ್. ಜಾನಕಿಯವರ ದೊಡ್ಡ ಅಭಿಮಾನಿ. ಹಲವಾರು ಕಡೆ ಅವರು ನೀಡಿರುವ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ. ಮೈಸೂರಿನಲ್ಲಿ ಅವರಿಂದ ಒಂದು ಕಾರ್ಯಕ್ರಮ ಮಾಡಿಸಬೇಕೆಂದು ಸುಮಾರು 10-15 ವರ್ಷಗಳಿಂದ ಅಂದುಕೊಂಡಿದ್ದೆ. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಈಗ ಅದು ನೆರವೇರುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ಗಾಯನದ ವೇದಿಕೆಯಲ್ಲಿ ಜಾನಕಿ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಅವರು ಸನ್ಮಾನ ಪ್ರದಾನ ಮಾಡಲಿದ್ದಾರೆಂದು ತಿಳಿಸಿದರು.
ಭಲೇ ಭಲೇ ಗಾರುಡಿ ಬರುತಿದೆ ನೋಡಿ….
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೆ ತಾಲೂಕಿನ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ್ದ ಬಾಲ್ಯದಿಂದಲೇ ಗಾಯನ ಮೈಗೂಡಿಸಿಕೊಂಡವರು. ಆನಂತರ, ಲತಾ ಮಂಗೇಶ್ಕರ್ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬೆಳೆದ ಅವರು ಮೊದಲು ಹಾಡಿದ್ದು ತಮಿಳಿನ “ವಿಧಿಯನ್ ವಿಳ್ಳೆ„ಯಾಟ್ಟು’ (1957) ಚಿತ್ರದಲ್ಲಿ. ಅದೇ ವರ್ಷ ಕನ್ನಡಕ್ಕೂ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಅವರು ಹಾಡಿದ ಮೊದಲ ಹಾಡು “ಶ್ರೀ ಕೃಷ್ಣ ಗಾರುಡಿ’ ಚಿತ್ರದ “ಭಲೇ ಭಲೇ ಗಾರುಡಿ ಬರುತಿದೆ ನೋಡಿ’ ಗೀತೆ. ಆದರೆ, ಇದರ ಬೆನ್ನಲ್ಲೇ ಅವರು “ರಾಯರ ಸೊಸೆ’ ಚಿತ್ರದಲ್ಲಿ “ತಾಳಲೆಂತು ಶೋಕಾವೇಗ’ ಎಂಬ ಹಾಡು ಹಾಡಿದ್ದರು. “ರಾಯರ ಸೊಸೆ’ ಚಿತ್ರ “ಶ್ರೀ ಕೃಷ್ಣ ಗಾರುಡಿ’ ಚಿತ್ರಕ್ಕಿಂತ ಮುನ್ನ ಬಿಡುಗಡೆಯಾಗಿದ್ದರಿಂದ ಜಾನಕಿ ಅವರು ಕನ್ನಡದಲ್ಲಿ ಮೊದಲು ಹಾಡಿದ ಹಾಡಿನ ಹೆಗ್ಗಳಿಕೆ ರಾಯರ ಸೊಸೆ ಚಿತ್ರದ ಪಾಲಾಗಿದೆ.