Advertisement

ಸೈಜಿಂಗ್‌ ಘಟಕ ಬಂದ್‌: ನೇಕಾರರು ಅತಂತ್ರ

11:21 AM May 22, 2020 | Suhan S |

ಬನಹಟ್ಟಿ: ಸೈಜಿಂಗ್‌ ಘಟಕ ಮತ್ತು ನೇಕಾರಿಕೆ ಪೂರಕವಾದ ಉದ್ಯೋಗಗಳು. ಸೈಜಿಂಗ್‌ ಘಟಕವೂ ಕೂಡಾ ನೇಕಾರಿಕೆ ಉದ್ಯೋಗದ ಅವಿಭಾಜ್ಯ ಅಂಗ. ಈಗ ಕೋವಿಡ್‌-19ನಿಂದಾಗಿ ರಬಕವಿ-ಬನಹಟ್ಟಿ ನಗರದಲ್ಲಿ 18 ಸೈಜಿಂಗ್‌ ಘಟಕದಲ್ಲಿರುವ ಯಂತ್ರೋಪಕರಣಗಳು ಧೂಳು ತಿನ್ನುತ್ತಿವೆ.

Advertisement

ಎಂಟು ವಾರಗಳಿಂದ ಸೈಜಿಂಗ್‌ ಘಟಕಗಳು ಕಾರ್ಯ ಸ್ಥಗಿತಗೊಳಿಸಿದ್ದು, ಸೈಜಿಂಗ್‌ ಘಟಕ ನಂಬಿಕೊಂಡಿದ್ದ ಕಾರ್ಮಿಕರು, ನೇಕಾರರ ಮತ್ತು ಮಾಲೀಕರ ಸ್ಥಿತಿ ಅತಂತ್ರವಾಗಿದೆ. ಒಂದು ಸೈಜಿಂಗ್‌ ಘಟಕದಲ್ಲಿ ಅಂದಾಜು 40-50 ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾರೆ. ಈಗ ಎರಡು ತಿಂಗಳಿಂದ ಘಟಕಗಳು ಬಂದ್‌ ಆಗಿದ್ದರಿಂದ ಎಲ್ಲ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ.

ಇನ್ನೂ ಮಾಲೀಕರ ಪರಿಸ್ಥಿತಿಯೂ ಕೂಡಾ ಬೇರೆಯಿಲ್ಲ. ಸೈಜಿಂಗ್‌ನಲ್ಲಿ ಲಕ್ಷಾಂತರ ಮೌಲ್ಯದ ಸೀರೆ ನೇಯ್ಗೆಗೆ ಬೇಕಾದ ಬಿಮ್‌ಗಳು ಕೂಡಾ ಧೂಳು ತಿನ್ನುತ್ತಿವೆ. ಮಗ್ಗಗಳು ಬಂದ್‌ ಆಗಿರುವುದರಿಂದ ಬಿಮ್‌ಗಳನ್ನು ಕೇಳುವವರೆ ಇಲ್ಲ. ಸೈಜಿಂಗ್‌ ಘಟಕಕ್ಕೆ ಬಿಮ್‌ ಪೂರೈಸದಿದ್ದರೆ ಮಗ್ಗಗಳು ನಡೆಯುವುದಿಲ್ಲ. ಮಗ್ಗಗಳು ಬಂದಾದರೆ ಬಿಮ್‌ ಕೇಳುವವರಿಲ್ಲದಂತಾಗುತ್ತದೆ.

ಮಾಲೀಕರು ಈ ಬಿಮ್‌ಗಳನ್ನು ತಯಾರಿ ಮಾಡಲು ಲಕ್ಷಾಂತರ ಹಣವನ್ನು ಕಚ್ಚಾ ವಸ್ತು ಮತ್ತು ಇನ್ನಿತರ ವಸ್ತುಗಳ ಮೇಲೆ ಹೂಡಿರುತ್ತಾರೆ. ಈಗ ಕಚ್ಚಾ ವಸ್ತುಗಳ ಹಣವೂ ಇಲ್ಲ. ಬಿಮ್‌ ಕೊಂಡವರು ಹಣವನ್ನು ನೀಡುತ್ತಿಲ್ಲ. ಇನ್ನೂ ಸೈಜಿಂಗ್‌ನಲ್ಲಿ ಹಾಗೇ ಉಳಿದುಕೊಂಡಿವೆ ಬಿಮ್‌ಗಳು.

ಸೈಜಿಂಗ್‌ ಘಟಕಗಳು ಮತ್ತೆ ಆರಂಭಗೊಳ್ಳಲು ಕಚ್ಚಾ ವಸ್ತುಗಳು ಪೂರೈಕೆ ಆಗಬೇಕು. ಈ ಕಚ್ಚಾ ವಸ್ತುಗಳು ಮಹಾರಾಷ್ಟ್ರ, ತಮಿಳನಾಡು ಮತ್ತು ಗುಜರಾತ್‌ನಿಂದ ಬರಬೇಕು. ಈಗ ಅಲ್ಲಿಯ ಕಾರ್ಮಿಕರು ಕೋವಿಡ್‌ನಿಂದಾಗಿ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಇನ್ನೂ ಅವರು ಬಂದು ಕೆಲಸ ಆರಂಭಿಸಿದರೆ ಮಾತ್ರ ಕಚ್ಚಾ ವಸ್ತುಗಳು ಪೂರೈಕೆಯಾಗುತ್ತವೆ.

Advertisement

ಅಲ್ಲಿಯವರೆಗೆ ಸೈಜಿಂಗ್‌ಗಳ ಘಟಕಗಳು ಕಾರ್ಯಾರಂಭ ಮಾಡುವುದಿಲ್ಲ ಎಂದು ಸೈಜಿಂಗ್‌ ಘಟಕದ ಕಾರ್ಯದರ್ಶಿ ಬ್ರಿಜ್‌ಮೋಹನ ಡಾಗಾ ತಿಳಿಸಿದ್ದಾರೆ.

ಈಗಾಗಲೇ ಜಿಎಸ್‌ಟಿಯಿಂದಾಗಿ ಜವಳಿ ಉದ್ದಿಮೆ ತೊಂದರೆಯಲ್ಲಿದೆ. ಈಗ ಕೋವಿಡ್‌-19ನಿಂದಾಗಿ ನಮ್ಮ ಉದ್ಯೋಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಉದ್ಯೋಗ ಮತ್ತೆ ಜೀವಂತವಾಗಬೇಕಾದರೆ ಹಲವು ವರ್ಷಗಳೇ ಬೇಕಾಗುತ್ತದೆ.  –ಬ್ರಿಜ್‌ಮೋಹನ ಡಾಗಾ, ಕಾರ್ಯದರ್ಶಿ, ಸೈಜಿಂಗ್‌ ಮಾಲೀಕರ ಸಂಘ

ಸೈಜಿಂಗ್‌ ನಡೆಸುವುದೆ ಇಂದಿನ ದಿನಗಳಲ್ಲಿ ಕಷ್ಟವಾಗಿದೆ. ಸರ್ಕಾರ ಕೇವಲ ನೇಕಾರಿಕೆಯ ಉದ್ಯೋಗಕ್ಕೆ ಮಾತ್ರ ಸೌಲಭ್ಯ ನೀಡುತ್ತಿದೆ. ನೇಕಾರಿಕೆಯ ಉದ್ಯೋಗದ ಇನ್ನೊಂದು ಭಾಗವಾಗಿರುವ ಸೈಜಿಂಗ್‌ ಘಟಕದತ್ತ ಗಮನ ನೀಡಬೇಕಾಗಿದೆ. –ರಾಮಣ್ಣ ಭದ್ರನವರ ಅಧ್ಯಕ್ಷರು, ಸೈಜಿಂಗ್‌ ಮಾಲೀಕರ ಸಂಘ

 

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next