Advertisement

ನಾಗರಪಂಚಮಿಗೆ ಸೀಯಾಳ ಅಭಾವ ಸಾಧ್ಯತೆ

01:08 AM Aug 04, 2023 | Team Udayavani |

ಬಜಪೆ: ಕರಾವಳಿಯ ವಿಶೇಷ ಹಬ್ಬ ನಾಗರ ಪಂಚಮಿಗೆ 17 ದಿನಗಳಷ್ಟೇ ಬಾಕಿ. ನಾಗಾರಾಧನೆಗೆ ಬೇಕಾದ ಅಗತ್ಯ ಪರಿಕರಗಳನ್ನು ಸಿದ್ಧಪಡಿಸುತ್ತಿರುವ ವ್ಯಾಪಾರಿಗಳೀಗ ಅಭಿಷೇಕಕ್ಕೆ ಮುಖ್ಯವಾದ ಸೀಯಾಳ (ಬೊಂಡ)ಗಳನ್ನು ಹೊಂದಿಸುವುದರಲ್ಲಿ ವ್ಯಸ್ತರಾಗಿದ್ದಾರೆ.

Advertisement

ಆ. 21 ರಂದು ನಾಗರಪಂಚಮಿ. ಕರಾವಳಿ ಯಲ್ಲಿ ತೆಂಗು ಬೆಳೆ ಯಥೇತ್ಛವಾಗಿ ಇದ್ದರೂ ಹೆಚ್ಚಿನ ಪ್ರಮಾಣದಲ್ಲಿ ಅಡುಗೆಗೆ ಮತ್ತು ಕೊಬ್ಬರಿ ಎಣ್ಣೆಗೆ ಬಳಸಲಾಗುತ್ತದೆ. ಹಾಗಾಗಿ ಹೊರ ಜಿಲ್ಲೆಗಳಿಂದಲೇ ಸೀಯಾಳ ಪೂರೈಕೆಯಾಗಬೇಕು. ಆದರೆ ಕೆಲವು ದಿನಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿರುವುದು ಚಿಂತೆಗೀಡು ಮಾಡಿದೆ.
ಬೇಸಗೆಯಲ್ಲಿ ಪ್ರತೀದಿನ ಎಂಬಂತೆ ಲಾರಿಗಳ ಮೂಲಕ ಪೂರೈಸಲಾಗುತ್ತಿತ್ತು. ಈಗ ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬರುತ್ತಿದೆ. ಕೆಲವು ಅಂಗಡಿ, ಗೂಡಂಗಡಿಗಳಲ್ಲಿ ಗ್ರಾಹಕ ಕೇಳಿದರೆ “ಈಗ ಸೀಯಾಳ ಇಲ್ಲ’ ಎಂಬ ಉತ್ತರ ಬರುತ್ತದೆ. ಕೆಂದಾಳಿ ಸೀಯಾಳ

ಸದ್ಯ ಹೊರ ರಾಜ್ಯಗಳ ಕೆಂದಾಳಿ ಸೀಯಾಳವೇ ಗತಿ. ವ್ಯಾಪಾರಿಗಳು ರಖಂ ದರ 40 ರೂ. ನಲ್ಲಿ ಖರೀದಿಸಿ 50 ರೂ. ಗಳಿಗೆ ಮಾರುತ್ತಿದ್ದಾರೆ. ಜಿಲ್ಲೆಯ ಇತರೆಡೆಯಿಂದ ಅಲ್ಪ ಪ್ರಮಾಣದಲ್ಲಿ ಬರುವ ಸೀಯಾಳ ಒಂದಕ್ಕೆ 32 ರೂ. ಗೆ ಪಡೆದು 40 ರೂ.ಗಳಂತೆ ಮಾರಲಾಗು ತ್ತಿದೆ.

ಮರ ಏರುವವರ ಕೊರತೆ
ಸ್ಥಳೀಯವಾಗಿ ಮರ ಏರಿ ಸೀಯಾಳ ತೆಗೆಯುವವರ ಕೊರತೆ ಸಮಸ್ಯೆಯ ಮತ್ತೂಂದು ಭಾಗ. ಒಂದು ಮರದಲ್ಲಿ ಕಾಯಿ ಎಷ್ಟೇ ಇರಲಿ; ಐದಾದರೂ ಹತ್ತಾದರೂ ಮರ ಏರುವವನಿಗೆ ಕನಿಷ್ಠ 100 ರೂ. ಕೊಡಬೇಕು. ಮತ್ತೆ ಅಂಗಡಿಗೆ ಸಾಗಿಸುವ ವೆಚ್ಚವನ್ನೂ ಬೆಳೆಗಾರನೇ ಪಾವತಿಸಬೇಕು. ಆದ್ದರಿಂದ ವ್ಯಾಪಾರಿಗಳೇ ಮರ ಏರುವವರನ್ನೂ ತೋಟಕ್ಕೆ ಕರೆತಂದು ಸೀಯಾಳ /ಕಾಯಿ ಕೊಂಡೊಯ್ಯುವ ಪರಿಸ್ಥಿತಿ ಇದೆ.

ಬೆಲೆ ಕಡಿಮೆಯಾಗಿಲ್ಲ!
ಮಳೆಗಾಲ ಆರಂಭವಾದ ಮೇಲೆ ಹೊರ ಜಿಲ್ಲೆಗಳಿಂದ ಬರುವ ಸೀಯಾಳ ಲಾರಿಗಳು ಸರಿಯಾಗಿ ಬರುತ್ತಿಲ್ಲ. ಇಳುವರಿಯೂ ಕಡಿಮೆ ಯಾದ ಕಾರಣ ಸೀಯಾಳವನ್ನು ಕೊಯ್ದು ಲಾರಿಗೆ ತುಂಬಲು 2 ದಿನ ನಿಲ್ಲಬೇಕು ಎನ್ನು ತ್ತಾರೆ ಲಾರಿಯಲ್ಲಿ ಸೀಯಾಳ ತರುವವರು. ಮಳೆಗಾಲದಲ್ಲಿ ಬೇಡಿಕೆ ಕಡಿಮೆ. ಆದರೂ ದರ ಜಾಸ್ತಿ ಎನ್ನುತ್ತಾರೆ ಬಜಪೆಯ ಸೀಯಾಳ ವ್ಯಾಪಾರಿ ಪದ್ಮನಾಭರು.

Advertisement

ವಿಳಂಬಿತ ಮಳೆ, ಕೊಯಿಲು ಇಲ್ಲ
ಈ ಬಾರಿ ಮಳೆ ವಿಳಂಬವಾಗಿ ಆರಂಭವಾ ಗಿದ್ದೂ, ಸೀಯಾಳ ಕೊರತೆಗೆ ಮತ್ತೂಂದು ಕಾರಣ. ತೆಂಗಿನ ಮರಗಳು ನೀರಿಲ್ಲದೆ ಕೆಂಪಾಗಿ ಕೊಯಿಲು ನಷ್ಟವಾ ಗಿದೆ. ನಾಗರಪಂಚಮಿ, ಅಷ್ಟಮಿ ಹಾಗೂ ಚೌತಿ ಸಮಯದಲ್ಲಿ ಬೇಕಾದಷ್ಟು ತೆಂಗಿನ ಕಾಯಿ, ಸೀಯಾಳ ಸಿಗುತ್ತಿತ್ತು. ಈ ಬಾರಿ ಕೊರತೆ ಆಗಬಹುದು ಎನ್ನುತ್ತಾರೆ ಬೆಳೆಗಾರರು.ತೆಂಗಿನ ಕಾಯಿಯ ದರದಲ್ಲಿ ಕೆ.ಜಿ.ಗೆ 24ರಿಂದ 29 ರೂ. ವರೆಗೆ ಏರಿದೆ. ಇನ್ನೂ ಹೆಚ್ಚಾಗುವ ನಿರೀಕ್ಷೆ ಕೃಷಿಕರದು.

ಐಸ್‌ಕ್ರೀಂಗೆ ಬಳಕೆ
ಈಗ ಸೀಯಾಳ ಐಸ್‌ಕ್ರೀಂ ತಯಾರಿಗೆ ಹೆಚ್ಚಾಗಿ ಹೋಗುತ್ತಿರುವುದೂ ಕೊರತೆಗೆ ಕಾರಣ. ಕರಾವಳಿ ಜಿಲ್ಲೆಯ ಬೊಂಡ ಐಸ್‌ಕ್ರೀಂ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ.
ಹೊರರಾಜ್ಯದಲ್ಲಿ ಸೀಯಾಳ ಬೇಡಿಕೆ

ಹೊರರಾಜ್ಯಗಳಲ್ಲೂ ಸೀಯಾಳದ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ರಾಜ್ಯದಲ್ಲಿ ಸೀಯಾಳ ಕೊರತೆಗೆ ಕಾರಣ. ರಾಜ್ಯದ ಇತರ ಜಿಲ್ಲೆಗಳಿಂದ ಕರಾವಳಿಗೆ ಬರುತ್ತಿದ್ದ ಸೀಯಾಳ ಪಾಲು ಸಹ ಹೊರ ರಾಜ್ಯಗಳ ಪಾಲಾಗುತ್ತಿದೆ. ನಮ್ಮ ಅಗತ್ಯಕ್ಕೆ ಮುಂಗಡ ಕಾದಿರಿಸಿ ಎರಡು-ಮೂರು ದಿನ ಕಾಯಬೇಕಾಗಿದೆ ಎನ್ನುತ್ತಾರೆ ಸ್ಥಳೀಯ ಸೀಯಾಳ ವ್ಯಾಪಾರಿಗಳು.

ಬಾಳೆ ಹಣ್ಣು ಕೂಡ ತುಟ್ಟಿ !
ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಪೂರೈಕೆಯಲ್ಲೂ ಕೊರತೆ ಕಾಣಿಸಿದ್ದು, 15 ದಿನಗಳಿಂದ ಬೆಲೆ ಏರುತ್ತಲೇ ಇದೆ. ಪೂರೈಕೆಯಾಗುವ ಹಣ್ಣು ಸಾಕಷ್ಟು ಪುಷ್ಟವಾಗಿಲ್ಲ. ಕದಳಿ ಹಣ್ಣು ಬೆರಳ ಗಾತ್ರ ಇದ್ದು ಅದನ್ನು ಮಾರುವುದಾದರೂ ಹೇಗೆ ಎಂಬ ಚಿಂತೆ ವ್ಯಾಪಾರಿಗಳದ್ದು.

ಶಿವಮೊಗ್ಗ, ಅರಸೀ ಕರೆ, ಹಾಸನ ಕಡೆ ಯಿಂದ ಕದಳಿ ಹಣ್ಣು ಹೆಚ್ಚಾಗಿ ಕರಾವಳಿಗೆ ಪೂರೈಕೆ ಯಾಗು ತ್ತಿದೆ. ಈ ವರ್ಷ ಅಲ್ಲಿ ಹೆಚ್ಚಿನ ಮಳೆ ಯಾಗಿ ಬೆಳೆ ಹಾನಿ ಸಂಭವಿಸಿರುವ ಪರಿಣಾಮ ಪೂರೈಕೆ ಕುಸಿದಿದೆ ಎಂದು ಮಂಗಳೂರು ರಥಬೀದಿಯ ಹಣ್ಣಿನ ವ್ಯಾಪಾರಿ ಕೃಷ್ಣಾನಂದ ನಾಯಕ್‌ ತಿಳಿಸಿದ್ದಾರೆ.

ಬಾಳೆಹಣ್ಣು, ಎಳನೀರು ಪೂರೈಕೆ ಪ್ರಮಾಣ ಕುಸಿತ
ಉಡುಪಿ: ಜಿಲ್ಲೆಯ ಮಾರುಕಟ್ಟೆಗೆ ಬಾಳೆ ಹಣ್ಣು, ಎಳನೀರು ಪೂರೈಕೆ ಪ್ರಮಾಣ ಕುಸಿತವಾಗಿದ್ದು, ದರ ಹೆಚ್ಚಳಕ್ಕೂ ಕಾರಣವಾಗಿದೆ. ಪುಟ್‌ಬಾಳೆ ಹಣ್ಣು ಸಾಕಷ್ಟು ಪ್ರಮಾಣದಲ್ಲಿ ಅರಸೀಕೆರೆ, ಶಿವಮೊಗ್ಗ ಮತ್ತಿತರ ಕಡೆಯಿಂದ ಉಡುಪಿ ಮಾರುಕಟ್ಟೆಗೆ ಬರುತ್ತದೆ. ಬಾಳೆ ಹಣ್ಣು ಕೆಲ ದಿನಗಳ ಹಿಂದೆ ಕೆಜಿಗೆ 60 ರೂ. ಇದ್ದ ದರ ಮೊದಲ ಬಾರಿಗೆ 90 ರೂ. ದಾಟಿದೆ ಎನ್ನುತ್ತಾರೆ ವ್ಯಾಪಾರಿಗಳು.

ರಸಬಾಳೆ, ಪಚ್ಚಬಾಳೆ, ನೇಂದ್ರ ಬಾಳೆ ಹಣ್ಣು ಪೂರೈಕೆಯಲ್ಲೂ ವ್ಯತ್ಯಾಸ ಕಂ ಕಂಡು ಬಂದಿದೆ. ಪುಟ್‌ಬಾಳೆ ಹೊರತುಪಡಿಸಿ ಇತರೆ ಬಾಳೆ ದರ ಹೆಚ್ಚಳವಾಗಿಲ್ಲ. ಸದ್ಯಕ್ಕೆ ಉಡುಪಿ ಮಾರುಕಟ್ಟೆಗೆ ಅರಸೀಕೆರೆ, ಶಿವಮೊಗ್ಗ ಭಾಗದಿಂದ ಎಳನೀರು ಪೂರೈಕೆಯಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಗೆ ಬಾರಕೂರು, ಕುಂದಾಪುರ ಭಾಗದಿಂದ ಎಳನೀರು ಬರುತ್ತಿದ್ದು, ಪೂರೈಕೆಯಾಗುತ್ತಿದೆ. ಬೇಡಿಕೆಯಷ್ಟು ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. 35 ರಿಂದ 40 ರೂ.ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ.

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next