Advertisement
ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ವರ್ಷದಿಂದ ಆಯೋಗದ ವರದಿಯತ್ತ ಚಿತ್ತ ಹರಿಸಿದ್ದು ಯಾವೆಲ್ಲಾ ಬೇಡಿಕೆಗಳು ಈಡೇರವಲಿವೆ, ಏನೆಲ್ಲಾ ಶಿಫಾರಸು ಮಾಡಲಾಗಿದೆ ಎಂಬುದರ ಬಗ್ಗೆ ಕುತೂಹಲ ಇದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಏರಿಸಲು ಶಿಫಾರಸು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ವೇತನ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸ ಮೇಲೆ 10 ಸಾವಿರ ಕೋಟಿ ರೂ.ಗೂ ಹೆಚ್ಚು ಹೊರೆ ಬೀಳಬಹುದೆಂದು ಅಂದಾಜಿಸಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಆರನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೂ ವಾರದಲ್ಲಿ ಎರಡು ದಿನ ರಜೆ ವ್ಯವಸ್ಥೆ ಇರಬೇಕು ಎಂಬುದು ಸೇರಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮವಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ, ಸೌಲಭ್ಯ ಇರಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳಿಂದ ಆಯೋಗಕ್ಕೆ ಮನವಿ ಸಹ ಸಲ್ಲಿಸಲಾಗಿತ್ತು.
ರಾಜ್ಯದಲ್ಲಿ 7ಲಕ್ಷ 93 ಸಾವಿರ ಮಂಜೂರಾದ ಸರ್ಕಾರಿ ನೌಕರರ ಹುದ್ದೆಗಳಿದ್ದು 5.45 ಲಕ್ಷ ನೌಕರರ ನೇಮಕವಾಗಿದೆ. 2.80 ಲಕ್ಷ ಹುದ್ದೆಗಳಿನ್ನೂ ಖಾಲಿ ಇವೆ. ಹಲವಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರ್ಕಾರಿ ನೌಕರರಿಗೆ ಕನಿಷ್ಠ ವೇತನ 22ಸಾವಿರ ರೂ.ಗಳಿಗೆ ನಿಗದಿಮಾಡಬೇಕು. ಹೊರ ಗುತ್ತಿಗೆ ಆಧಾರದ ನೇಮಕಾತಿ ರದ್ದುಪಡಿಸಬೇಕು. ಪ್ರತಿ ಶನಿವಾರ
ರಜೆಯ ಜತೆಗೆ ಕೆಲಸದ ಅವಧಿಯಲ್ಲೂ ಬದಲಾವಣೆ ಮಾಡಬೇಕು. ಒತ್ತಡದಲ್ಲಿ ಕೆಲಸಮಾಡುವ ಸರ್ಕಾರಿ ನೌಕರರಿಗೆ ಕನಿಷ್ಠ 45ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.