Advertisement

ಆರನೇ ಕ್ಲಾಸಿಂದ ಆಂಗ್ಲ ಮಾಧ್ಯಮ: ತನ್ವೀರ್ ಸೇಠ್

03:45 AM May 18, 2017 | |

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಡ್ರಾಪ್‌ಔಟ್‌ ತಡೆಯಲು ಈ ಶೈಕ್ಷಣಿಕ ವರ್ಷದಿಂದಲೇ 3,770 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

Advertisement

ನಗರದ ನೃಪತುಂಗ ರಸ್ತೆಯಲ್ಲಿರುವ ಸರ್ವಶಿಕ್ಷಾ ಅಭಿಯಾನದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ 1ನೇ ತರಗತಿಯಿಂದಲೇ ಇಂಗ್ಲಿಷ್‌ನ್ನು ಪರಿಣಾಮಕಾರಿಯಾಗಿ ಕಲಿಸಲಿದ್ದೇವೆ. ಹಾಗೆಯೇ 6ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮವನ್ನು ಆಯ್ದ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಿದ್ದೇವೆ. 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಅನೇಕ ವರ್ಷಗಳ ಹಿಂದೆಯೇ ಸರ್ಕಾರದಿಂದ ಅನುಮತಿ ಪಡೆಯಲಾಗಿದೆಯಾದರೂ, ಇಂಗ್ಲಿಷ್‌ ಶಿಕ್ಷಕರ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಈ ವರ್ಷ 5,200 ಇಂಗ್ಲಿಷ್‌ ಶಿಕ್ಷಕರಿಗೆ ವಿಶೇಷ  ತರಬೇತಿ ನೀಡಿದ್ದೇವೆ ಎಂದು ಹೇಳಿದರು.

ಕೆಲವು ಸರ್ಕಾರಿ ಪ್ರೌಢಶಾಲೆಯಲ್ಲಿ (9 ಮತ್ತು 10ನೇ ತರಗತಿ) ಈಗಾಗಲೇ ಆಂಗ್ಲ ಮಾಧ್ಯಮ ಇದೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಇಲ್ಲ. ಈ ವರ್ಷದಿಂದ ಆರಂಭವಾಗಲಿದೆ. ಇದರಿಂದ ಐದನೇ ತರಗತಿಯ ನಂತರ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ. ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯುವ ಸಂಬಂಧ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನೀಡುವ ಪ್ರಸ್ತಾವನೆ ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ ಎಂದರು.

176 ಕ್ಲಸ್ಟರ್‌ ಸ್ಕೂಲ್‌:
ಸರ್ಕಾರಿ ಶಾಲೆಗೆ ಕಾರ್ಪೊರೇಟ್‌ ಟಚ್‌ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಹೋಬಳಿಗಳಲ್ಲಿ 176 ಕ್ಲಸ್ಟರ್‌ ಶಾಲೆ ತೆರೆಯಲಿದ್ದೇವೆ. 1ರಿಂದ 12ರವರೆಗೂ ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ತರಗತಿಗಳು ಲಭ್ಯವಿರುತ್ತವೆ. ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿ ಪಿಯು ತನಕ ಶಿಕ್ಷಣವನ್ನು ಒಂದೇ ಶಾಲೆಯಲ್ಲಿ ಪೂರೈಸಬಹುದು. ವಿದ್ಯಾರ್ಥಿಗಳು ಆಗಾಗ ಶಾಲೆ ಬದಲಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಕಂಪ್ಯೂಟರ್‌, ಇಧಿಗ್ರಂಥಾಲಯ ಮೊದಲಾದ ಸೌಲಭ್ಯವನ್ನು ಕ್ಲಸ್ಟರ್‌ ಶಾಲೆಗೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆದರ್ಶ ಶಾಲೆ ಮೇಲ್ದರ್ಜೆಗೆ:
ರಾಜ್ಯದಲ್ಲಿ 72 ಆದರ್ಶ ವಿದ್ಯಾಲಯ ಇದೆ. ಈ ವರ್ಷ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ.93.78ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ಆದರ್ಶ ಶಾಲೆಯ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸಲು ಕೇಂದ್ರೀಯ ವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೂಲಕ ಶಿಕ್ಷಕರಿಗೆ ತರಬೇತಿ ನೀಡುತ್ತೇವೆ. 450ಕ್ಕೂ ಅಧಿಕ ಮಕ್ಕಳಿದ್ದು, ಆದರ್ಶ ಶಾಲೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

Advertisement

ಈ ಶೈಕ್ಷಣಿಕ ವರ್ಷದಿಂದ 9ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಕ್ಕೆ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅಳವಡಿಸಲಾಗುತ್ತದೆ. ಮುಂದಿನ ವರ್ಷದಿಂದ ಎಸ್ಸೆಸ್ಸೆಲ್ಸಿ ವಿಜ್ಞಾನ ಮತ್ತು ಗಣಿತ ಪರೀಕ್ಷೆ ಎನ್‌ಸಿಇಆರ್‌ಟಿ ಪಠ್ಯಕ್ರಮದಂತೆ ನಡೆಯಲಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನು ವೆಬ್‌ಸೈಟ್‌ನಲ್ಲೂ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಹೇಳಿದರು.

ಆರ್‌ಟಿಇ ಮೊದಲ ಸುತ್ತಿನಲ್ಲಿ 96 ಸಾವಿರ ಸೀಟು ಹಂಚಿಕೆಯಾಗಿದ್ದು, ಅದರಲ್ಲಿ 84 ಸಾವಿರ ಮಕ್ಕಳ ದಾಖಲಾತಿ ಪೂರ್ಣಗೊಂಡಿದೆ. ಇನ್ನೂ 12 ಸಾವಿರ ಮಕ್ಕಳ ದಾಖಲಾತಿ ಬಾಕಿ ಇದೆ. ಈ ಬಗ್ಗೆ ಸಂಬಂಧಪಟ್ಟ ಬಿಇಒಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ಆದಷ್ಟು ಬೇಗ ದಾಖಲಾತಿಗೆ ಸೂಚನೆ ನೀಡಿದ್ದೇವೆ. ಮೇ.19ರಂದು ಎರಡನೇ ಸುತ್ತಿನ ಆರ್‌ಟಿಇ ಸೀಟು ಹಂಚಿಕೆ ನಡೆಯಲಿದೆ.

ದಾಖಲಾತಿ ಆಂದೋಲನ:
ಜೂನ್‌ 1ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಆರಂಭವಾಗಲಿದ್ದು, ಮೇ 31ರ ತನಕವೂ ದಾಖಲಾತಿ ಆಂದೋಲನ ನಡೆಯಲಿದೆ. ಇದಾದ ನಂತರ ಆಯಾ ಭಾಗದ ಸರ್ಕಾರಿ ಶಾಲೆ ಮುಖ್ಯಸ್ಥರು ಜೂ.1 ರಿಂದ ಜೂ.30ರ ವರೆಗೆ ಮಕ್ಕಳ ದಾಖಲಾತಿಗೆ ವಿಶೇಷ ಆಂದೋಲನ ನಡೆಸಲಿದ್ದಾರೆ.  ಆಂದೋಲನಕ್ಕೆ ಸಂಬಂಧಿಸಿದ ಎರಡು ವಿಡಿಯೋ ಕೂಡ ಸಿದ್ಧಪಡಿಸಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next