ಮೈಸೂರು: ಕೋವಿಡ್ ಸೋಂಕು ವಿಚಾರ ಹರಡಿದ ಬೆನ್ನೆಲ್ಲೇ ಮೈಸೂರು ಜಿಲ್ಲೆಯಲ್ಲಿ ಆರು ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆರು ಮಂದಿ ರೋಗಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಪಿ ಸಿ ಕುಮಾರಸ್ವಾಮಿ ಹೇಳಿದ್ದಾರೆ.
ಯಾವುದೇ ಟ್ರಾವಲ್ ಇಸ್ಟರಿ ಇಲ್ಲದಿದ್ದರೂ ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ. ಐದು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದು, 48 ವರ್ಷದ ಓರ್ವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಸೋಂಕು ಪತ್ತೆಯಾದ ಎಲ್ಲಾ ಆರು ಮಂದಿಗೂ ತುರ್ತು ನಿಗಾ ಘಟಕದಲ್ಲಿರಿಸಿ ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿಸಿ ಪರಿಶೀಲನೆ: ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ರಾಜ್ಯಗಳ ಗಡಿ ಭಾಗವಾದ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನಲ್ಲಿರುವ ಬಾವಲಿ ಚೆಕ್ ಪೋಸ್ಟ್ ಅನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪರಿಶೀಲಿಸಿದರು.
ಈ ವೇಳೆ ಜಿಪಂ ಮುಖ್ಯ ಸಿಇಒ ಕೆ.ಎಂ.ಗಾಯಿತ್ರಿ, ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಬಿಂದಾಸ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಉಪಸ್ಥಿತರಿದ್ದರು.