Advertisement

ನಕಲಿ ಅಧಿಕಾರಿ ಸೋಗಿನಲ್ಲಿ ದರೋಡೆಗೆ ಯತ್ನ: ಆರು ಮಂದಿ ಸೆರೆ

12:40 PM Jan 08, 2018 | Team Udayavani |

ಬೆಂಗಳೂರು: ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಹೆಸರಿನಲ್ಲಿ ಗುಡಿ ಕೈಗಾರಿಕಾ ಕಾರ್ಖಾನೆ ಮಾಲೀಕನ ಬಳಿ ಎರಡು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ರೌಡಿಶೀಟರ್‌ ಸೇರಿ ಆರು ಮಂದಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಇಂದಿರಾನಗರದ ನಿವಾಸಿ ರೌಡಿಶೀಟರ್‌ ರಾಮಚಂದ್ರ (29), ಸಂತೋಷ್‌ ಕುಮಾರ್‌ (29), ಪ್ರವೀಣ್‌ ಕುಮಾರ್‌ (23), ಪುಟ್ಟರಾಜು (26), ನಿಖೀಲ್‌ ಓಲಿವರ್‌ (27) ಹಾಗೂ ಹಲಸೂರಿನ ಕಾರ್ತಿಕ್‌ (28) ಬಂಧಿತರು. ಆರೋಪಿಗಳಿಂದ ಒಂದು ಕಾರು, ನಕಲಿ ಗುರುತಿನ ಚೀಟಿಗಳು ಹಾಗೂ ವಿಸಿಟಿಂಗ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪೈಕಿ ರಾಮಚಂದ್ರನ ವಿರುದ್ಧ ನಗರದ ಎರಡು ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಈತನ ವಿರುದ್ಧ ಇಂದಿರಾನಗರ ಮತ್ತು ಭಾರತೀನಗರ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 12ಕ್ಕೂ ಅಧಿಕ ದರೋಡೆ, ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಷಹಬಾಜ್‌ ಎಂಬುವರು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದು, ಸಂಪಿಗೆಹಳ್ಳಿಯ ಸಾರಾಯಿಪಾಳ್ಯದ ಅಬೂಬಕರ್‌ ಮಸೀದಿ ಬಳಿ ನೆಲೆಸಿದ್ದಾರೆ. ಇಲ್ಲಿಯೇ ಬ್ಯಾಗ್‌ ತಯಾರಿಕಾ ಗುಡಿ ಕೈಗಾರಿಕೆ ಇಟ್ಟುಕೊಂಡಿದ್ದಾರೆ. ಜ.6ರಂದು ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಮನೆಗೆ ಬಂದ ಆರೋಪಿಗಳು ತಮ್ಮ ಬಳಿಯಿದ್ದ ನಕಲಿ ಗುರುತಿನ ಚೀಟಿ ತೋರಿಸಿದ್ದಾರೆ. ಇದನ್ನು ನಂಬಿದ ಷಹಬಾಜ್‌ ಎಲ್ಲರಿಗೂ ಉಪಚರಿಸಿದ್ದಾರೆ.

ಹಣಕ್ಕೆ ಬೇಡಿಕೆ: ಈ ವೇಳೆ ಆರೋಪಿಗಳು ಪರವಾನಿಗೆ ಪಡೆಯದೇ ಗುಡಿ ಕೈಗಾರಿಕೆ ನಡೆಸುತ್ತಿದ್ದೀರಾ, ಇಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದು ಕಾನೂನು ಪ್ರಕಾರ ಉಲ್ಲಂಘನೆ ಎಂದು ಹೆದರಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ಷಹಬಾಜ್‌ ನಕಲಿ ಅಧಿಕಾರಿಗಳ ಬಳಿ ಯಾವುದೇ ಕ್ರಮಕೈಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ಆಗ ಆರೋಪಿಗಳು 2 ಲಕ್ಷ ರೂ. ಹಣ ಕೊಟ್ಟರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬೀಗ ಜಡಿದ ಆರೋಪಿಗಳು: ಗುಡಿ ಕೈಗಾರಿಕೆ ಮಾಲೀಕ ಷಹಬಾಜ್‌ ಹಣ ನೀಡಲು ನಿರಾಕರಿಸಿದ್ದರಿಂದ ಗುಡಿ ಕೈಗಾರಿಕೆಗೆ ಆರೋಪಿಗಳು ಬೀಗ ಜಡಿದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ. ನಂತರ ಬೆನ್ನತ್ತಿದ್ದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾಧಿಕಾರಿಗಳಿಗೆ ಹೆದರುತ್ತಾರೆ ಎಂಬುದನ್ನೇ  ಬಂಡವಾಳ ಮಾಡಿಕೊಂಡು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಜನೀ ಪ್ಯಾನ್‌..: ಬಂದಿತರ ಪೈಕಿ ಸಂತೋಷ್‌ ಕುಮಾರ್‌ ಅಖೀಲ ಕರ್ನಾಟಕ ಸೂಪರ್‌ ಸ್ಟಾರ್‌ ರಜನಿಕಾಂತ್‌ ಪ್ಯಾನ್ಸ್‌ ಅಸೋಸಿಯೇಷನ್‌ ಮುಖಂಡನಾಗಿದ್ದ. ಇತ್ತೀಚೆಗೆ ರಜನೀಕಾಂತ್‌ ರಾಜಕೀಯ ಪ್ರವೇಶದ ಕುರಿತು ಬಹಿರಂಗ ಸಭೆ ನಡೆಸಿದ ಸಂದರ್ಭದಲ್ಲಿಯೂ ಚೆನ್ನೈಗೆ ತೆರಳಿ ಶುಭಾಶಯ ಕೋರಿದ್ದ. ಬೆಂಗಳೂರಿಗೆ ನಟ ರಜನಿಕಾಂತ್‌ ಆಗಮಿಸಿದಾಗ ಇಲ್ಲಿನ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next