ಬೆಂಗಳೂರು: ನಗರದಲ್ಲಿ ಮಂಗಳವಾರ ಹೊಸದಾಗಿ ಆರು ಕೋವಿಡ್ 19 ವೈರಸ್ ಸೋಂಕು ಪ್ರಕರಣ ಪತ್ತೆಯಾಗಿವೆ. ಅಲ್ಲದೇ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 246ಕ್ಕೆ, ಚಿಕಿತ್ಸೆ ಫಲಕಾರಿಯಾಗದೇ ಮೃತರಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮಂಗಳವಾರ ದೃಢಪಟ್ಟ ಸೋಂಕು ಪ್ರಕರಣಗಳ ಪೈಕಿ ಪಾದರಾಯನಪುರದಲ್ಲಿ ಮೂವರು, ಮಂಗಮ್ಮನಪಾಳ್ಯ, ಕೆಜಿ ಹಳ್ಳಿಯಲ್ಲಿ ಒಬ್ಬರು, ಜ್ಞಾನಭಾರತಿ ವಾರ್ಡ್ ಮೃತ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹೊರತು ಪಡಿಸಿ ಬಾಕಿ ಐದು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರ್.ಆರ್.ನಗರ ವಲಯದ ಜ್ಞಾನಭಾರತಿ ವಾರ್ಡ್ 54 ವರ್ಷದ ವ್ಯಕ್ತಿಯು ಸೋಮವಾರ ಸಂಜೆ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಸಂಬಂಧಿಕರ ಮಗುವನ್ನು ನೋಡಲು ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಆದರೆ, ನಿಯಮದನ್ವಯ ಅವರ ಗಂಟಲು ದ್ರವ ಪರೀಕ್ಷೆ ತೆಗೆದುಕೊಳ್ಳಲಾಗಿತ್ತು. ಮಂಗಳವಾರ ಬಂದ ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈ ಮೃತ ವ್ಯಕ್ತಿಯೊಂದಿಗೆ ಪ್ರಥಮ ಸಂಪರ್ಕ ಹೊಂದಿದ್ದ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಪಾದರಾಯನಪುರದಲ್ಲಿ ಸೋಂಕಿತ 24 ವರ್ಷದ ಯುವಕ (ಪಿ- 608) ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರಿಗೆ ಸೋಂಕು ಹರಡಿದೆ.
ಸಂಪರ್ಕ ಹಿನ್ನೆಲೆ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಿಯಮದನ್ವಯ ಕ್ವಾರಂಟೈನ್ ಮುಗಿಯುವ ವೇಳೆ ಪರೀಕ್ಷೆ ನಡೆಸಿದಾಗ ಸೋಂಕಿರುವುದು ದೃಢಪಟ್ಟಿದೆ. ಮಂಗಮ್ಮನಪಾಳ್ಯದ ರ್‍ಯಾಂಡಮ್ ತಪಾಸಣೆ ವೇಳೆ ಇಪ್ಪತ್ತು ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಮತ್ತೂಂದು ಪ್ರಕರಣದಲ್ಲಿ ತೀವ್ರ ಉಸಿರಾಟ ಸಮಸ್ಯೆಯೊಂದಿದ್ದ ಕೆ.ಜಿ. ಹಳ್ಳಿಯ 32 ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಇವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ನಗರದ ಸೋಂಕಿತರ ಪೈಕಿ 49 ವರ್ಷದ ಮಹಿಳೆಯೊಬ್ಬರು ಗುಣ ಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟಾರೆ 246 ಪ್ರಕರಣಗಳ ಪೈಕಿ 123 ಮಂದಿ ಗುಣಮುಖರಾಗಿದ್ದು, 114 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಎಂಟು ಮಂದಿ ಚಿಕಿತ್ಸೆ ಫಲಕಾರಿಯಾಗದೇ, ಒಬ್ಬ ಸೋಂಕಿತ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ.
ಕ್ವಾರಂಟೈನ್ ಕೇಂದ್ರಗಳ ಲ್ಲಿರುವ ಹೋಟೆಲ್‌ನ ಸಿಬ್ಬಂದಿ ಆರೋಗ್ಯ ದೃಷ್ಟಿ ಹಾಗೂ ಕ್ವಾರಂಟೈನ್‌ನಲ್ಲಿರುವವರು ಅವರ ಸಂಪರ್ಕದಲ್ಲಿ ಬರದೆ ಇರುವಂತೆ ಕ್ರಮವಹಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಶೀಘ್ರ ಮಾರ್ಗಸೂಚಿ ಹೊರಡಿಸಲು ಕ್ರಮ ವಹಿಸಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ