ಅಮೃತಸರ : ಆಮ್ಲಜನಕ ಕೊರತೆಯಿಂದ ಸಾವಿನ ಸರಣಿ ಮುಂದುವರೆದಿದ್ದು, ಇದೀಗ ಅಮೃತಸರದಲ್ಲಿಯೂ ಕೂಡ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಶನಿವಾರ ( ಏಪ್ರಿಲ್ 24) ಪಂಜಾಬ್‍ನ ಅಮೃತಸರನ ನೀಲಕಂಠ ಖಾಸಗಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಆಕ್ಸಿಜನ್ ಅಭಾವದಿಂದಾಗಿ ಓರ್ವ ಮಹಿಳೆ ಸೇರಿ ಆರು ಜನರು ದುರ್ಮರಣಕ್ಕೀಡಾಗಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಆಸ್ಪತ್ರೆಯ ಚೇರಮನ್ ಸುನಿಲ್ ದೆವಗನ್, ಆಕ್ಸಿಜನ್ ಅಭಾವದ ಕುರಿತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರು, ಅವರಿಂದ ಸ್ಪಂದನೆ ದೊರೆಯಲಿಲ್ಲ. 6 ಜನರ ಪ್ರಾಣ ಪಕ್ಷಿ ಹಾರಿ ಹೋದ ಮೇಲೆ 5 ಆಕ್ಸಿಜನ್ ಸಿಲಿಂಡರ್ ಆಸ್ಪತ್ರೆಗೆ ಬಂದು ತಲುಪಿದವು ಎಂದಿದ್ದಾರೆ.
ಮೂರು ಆಕ್ಸಿಜನ್ ಸಿಲಿಂಡರ್ ಗಳಿಗೆ ಆರ್ಡರ್ ಮಾಡಿದ್ದೇವು. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಿದ್ದರಿಂದ ನಮಗೆ ದೊರೆಯಲಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯನ್ನು ತಡೆಯಲು ಆಕ್ಸಿಜನ್ ಉತ್ಪಾದಕ ಘಟಕಗಳ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಜನರು ಸಾವನ್ನಪ್ಪಿದ ಘಟನೆ ತಿಳಿದರೂ ಜಿಲ್ಲಾಡಳಿತ ಸ್ಥಳಕ್ಕೆ ಬಂದಿಲ್ಲ ಎಂದು ದೇವಗನ್ ಹೇಳಿದ್ದಾರೆ.
ಇನ್ನು ಶುಕ್ರವಾರ(ಏ.23) ರಾತ್ರಿಯಷ್ಟೆ ರಾಷ್ಟ್ರರಾಜಧಾನಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.