ಕೊಲ್ಕತ್ತಾ : ಭಾನುವಾರ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಆದ್ರೆ ಪಶ್ಚಿಮ ಬಂಗಾಳದಲ್ಲಿ ಫಲಿತಾಂಶದ ದಿನದಂದು ಭಾರೀ ಹಿಂಸಾಚಾರ ನಡೆದಿದೆ. ಈ ವೇಳೆ ಆರು ಜನ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲಾಗಿದ್ದು, ಬಿಜೆಪಿ ಕಾರ್ಯಾಲಯ ಮತ್ತು ಅನೇಕ ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಈ ಹಿಂಸಾಚಾರವನ್ನು ಮಾಡಿರುವುದು ಟಿಎಂಸಿ ಪಕ್ಷದವರೇ ಎಂದು ಬಂಗಾಳ ಬಿಜೆಪಿ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಟಿಎಂಸಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ಹಿಂಸಾಚಾರದ ಬಗ್ಗೆ ವರದಿ ನೀಡುವಂತೆ ಗೃಹ ಸಚಿವಾಲಯ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ.
ಟ್ವಿಟ್ಟರ್ ನಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ದೊಣ್ಣೆ ಹಿಡಿದುಕೊಂಡಿರುವ ಗುಂಪೊಂದು ಬಿಜೆಪಿ ಕಾರ್ಯಕರ್ತರನ್ನು ಹುಡುಕಿಕೊಂಡು ಮನೆಗಳಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನಂತರ ಇದೇ ರೀತಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಫಲಿತಾಂಶದ ದಿನದಂದು ರಾಜ್ಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿ ನೀಡುವಂತೆ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಸೋಮವಾರ ಡಿಜಿಪಿಗೆ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಪಕ್ಷ ಟಿಎಂಸಿ ಗೆದ್ದಿದೆ ಎಂದ ತಕ್ಷಣ ರಾಜ್ಯದಲ್ಲಿ ಹಲವು ಕಡೆ ಬಿಜೆಪಿ ಕಾರ್ಯಾಲಯಗಳಿಗೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.