ಮಧ್ಯಪ್ರದೇಶ: ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಹಿಂಸಾಚಾರದಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಮೂವರು ಮಹಿಳೆಯರು ಸೇರಿದ್ದು ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯ ಪ್ರದೇಶದ ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ ಜಿಲ್ಲಾ ಕೇಂದ್ರದಿಂದ 50 ರಿಂದ 60 ಕಿಮೀ ದೂರದಲ್ಲಿರುವ ಲೇಪಾ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಘಟನೆಯಲ್ಲಿ ಕೆಲವರು ಒಂದು ಕುಟುಂಬದ ಸದಸ್ಯರು ಕೈಯಲ್ಲಿ ಬಂದೂಕು ಹಿಡಿದಿದ್ದು ಇನ್ನೊಂದು ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.
2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದವು ಎನ್ನಲಾಗಿದ್ದು ಆ ವೇಳೆ ಜಗಳ ತಾರಕಕ್ಕೇರಿ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು ಎನ್ನಲಾಗಿದೆ.
2013ರ ಬಳಿಕ ಗ್ರಾಮದಿಂದ ಪಲಾಯನ ಮಾಡಿದ್ದ ಗಜೇಂದ್ರ ಸಿಂಗ್ ಕುಟುಂಬ ಇಂದು ಈ ಗ್ರಾಮಕ್ಕೆ ಮರಳಿದೆ ಈ ವೇಳೆ ಧೀರ್ ಸಿಂಗ್ ತೋಮರ್ ಅವರ ಕುಟುಂಬವು ಕೊಲೆಗೆ ಪ್ರತಿಕಾರ ತೀರಿಸಲು ಗಜೇಂದ್ರ ಸಿಂಗ್ ಕುಟುಂಬದ ಸದಸ್ಯರ ಮೇಲೆ ಕೋಲುಗಳಿಂದ ದಾಳಿ ನಡೆಸಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಇದರಿಂದ ಗಜೇಂದ್ರ ಸಿಂಗ್ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.