ಹೊಸದಿಲ್ಲಿ: ಭೀಕರ ಬಾಲಸೋರ್ ದುರಂತ ನಡೆದು ಕೆಲವೇ ದಿನಗಳ ಬಳಿಕ ಅದೇ ಒಡಿಶಾ ರಾಜ್ಯದಲ್ಲಿ ಮತ್ತೊಂದು ರೈಲು ದುರಂತ ನಡೆದಿದೆ. ಜಜ್ಪುರ ಜಿಲ್ಲೆಯಲ್ಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ಆರು ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಜಜ್ಪುರ ಕಿಯೋಂಜರ್ ರಸ್ತೆ ರೈಲು ನಿಲ್ದಾಣದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಈ ವೇಳೆ ಕಾರ್ಮಿಕರು ಗೂಡ್ಸ್ ರೈಲಿನ ಕೆಳಗೆ ಮಳೆಯಿಂದ ಆಶ್ರಯ ಪಡೆದಿದ್ದರು. ಈ ವೇಳೆ ರೈಲು ಚಲಿಸಲು ಆರಂಭಿಸಿತ್ತು.
“ದಿಢೀರ್ ಗುಡುಗು ಸಹಿತ ಮಳೆಯಾಯಿತು. ಗೂಡ್ಸ್ ರೈಲು ನಿಂತಿದ್ದ ರೈಲ್ವೇ ಸೈಡಿಂಗ್ ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿಢೀರ್ ಮಳೆಯ ಕಾರಣಕ್ಕೆ ಅವರು ಅದರ ಅಡಿಯಲ್ಲಿ ಆಶ್ರಯ ಪಡೆದರು ಆದರೆ ದುರದೃಷ್ಟವಶಾತ್, ಎಂಜಿನ್ ಅನ್ನು ಜೋಡಿಸದ ಗೂಡ್ಸ್ ರೈಲು ಚಲಿಸಲು ಪ್ರಾರಂಭಿಸಿತು, ಇದು ಅಪಘಾತಕ್ಕೆ ಕಾರಣವಾಯಿತು” ರೈಲ್ವೆ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ:Mumbai: ಭೀಕರ ಹತ್ಯೆ; ದೇಹದ ಭಾಗವನ್ನು ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ
Related Articles
ಗಾಯಗೊಂಡ ಕಾರ್ಮಿಕರನ್ನು ಕಟಕ್ ಎಸ್ ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದುರದೃಷ್ಟಕರ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡಿರುವ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.