ನವದೆಹಲಿ: ಇನ್ನು ಮುಂದೆ ಗರಿಷ್ಠ 8 ಪ್ರಯಾಣಿಕರನ್ನು ಹೊತ್ತೂಯ್ಯಬಲ್ಲಂಥ ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು ಇರಬೇಕಾದ್ದು ಕಡ್ಡಾಯವಾಗಲಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಸ್ವತಃ ಈ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ಆದಷ್ಟು ಬೇಗ ಇಂಥದ್ದೊಂದು ನಿಯಮ ಜಾರಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಇಂಟೆಲ್ ಇಂಡಿಯಾದ ಸುರಕ್ಷತಾ ಪ್ರವರ್ತಕರ ಸಮ್ಮೇಳನ 2022ರಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಗಡ್ಕರಿ, “ದೇಶಾದ್ಯಂತ ಸುಮಾರು 5 ಲಕ್ಷ ಅಪಘಾತಗಳಿಂದ 1.5 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಾರೆ. ಹೀಗಾಗಿ ನಾವು ಜನರ ಪ್ರಾಣವನ್ನು ಉಳಿಸಬೇಕಿದೆ. ಅದಕ್ಕಾಗಿ ಮೋಟಾರು ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.
ಅತ್ಯಧಿಕ ತೆರಿಗೆ, ಕಠಿಣ ಸುರಕ್ಷತಾ ಹಾಗೂ ಇಂಗಾಲ ಹೊರಸೂಸುವಿಕೆ ನಿಯಮಗಳಿಂದಾಗಿ ವಾಹನಗಳ ತಯಾರಿಕಾ ವೆಚ್ಚ ಹೆಚ್ಚಳವಾಗುತ್ತಿದೆ ಎಂದು ಆಟೋಮೊಬೈಲ್ ಉದ್ಯಮಗಳು ಕಳವಳ ವ್ಯಕ್ತಪಡಿಸಿರುವಂತೆಯೇ ಗಡ್ಕರಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
Related Articles
ವೆಚ್ಚ ಹೆಚ್ಚಾದರೆ ಕಾರು ತಯಾರಿಗೆ ಸ್ಥಗಿತ
ಕೇಂದ್ರ ಸರ್ಕಾರದ ಕೆಲವೊಂದು ನಿಯಮಗಳಿಂದಾಗಿ ವಾಹನ ತಯಾರಿಕಾ ವೆಚ್ಚವು ಗಣನೀಯವಾಗಿ ಹೆಚ್ಚಳವಾಗಿದ್ದು, ಅವುಗಳು ಜನಸಾಮಾನ್ಯನ ಕೈಗೆಟುಕದಂಥ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಣ್ಣ ಕಾರುಗಳ ತಯಾರಿಕೆ ಸ್ಥಗಿತಗೊಳಿಸಲು ನಾವು ಹಿಂದೆಮುಂದೆ ನೋಡುವುದಿಲ್ಲ ಎಂದು ಮಾರುತಿ ಸುಜುಕಿ ಮುಖ್ಯಸ್ಥ ಆರ್.ಸಿ. ಭಾರ್ಗವ ಹೇಳಿದ್ದಾರೆ. 6 ಏರ್‌ಬ್ಯಾಗ್ ಕಡ್ಡಾಯಗೊಳಿಸಿದರೆ ಕಾರುಗಳ ದರ ಏರಿಕೆಯಾಗುತ್ತದೆ. ಇದರಿಂದ ಅಪಘಾತ ತಗ್ಗುತ್ತದೆ ಎನ್ನುವುದನ್ನು ಒಪ್ಪಲಾಗದು. ಅಲ್ಲದೇ, ಕಾಂಪ್ಯಾಕ್ಟ್ ಕಾರುಗಳ ಮಾರಾಟದಿಂದ ಕಂಪನಿಗಳಿಗೆ ಹೆಚ್ಚಿನ ಲಾಭವೂ ಆಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.