Advertisement

ಹೊಟೇಲ್‌ ವ್ಯವಹಾರದ ಸಮಯ ಮತಷ್ಟು ವಿಸ್ತರಿಸಲು ಯತ್ನ : ಶಿವಾನಂದ ಶೆಟ್ಟಿ

03:00 PM Nov 11, 2021 | Team Udayavani |

ಮುಂಬಯಿ, ನ. 10: ಆಹಾರ್‌ನ ನಿರಂತರ ಪ್ರಯತ್ನದಿಂದಾಗಿ ಮಹಾರಾಷ್ಟ್ರ ಸರಕಾರವು ಉಪಾಹಾರಗೃಹಗಳಿಗೆ ರಾತ್ರಿ 12ರ ವರೆಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಿದ್ದು, ಇದು ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡಿದಂತಾಗಿದೆ.

Advertisement

ನಾವು ಇನ್ನೂ ಸಮಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಅದನ್ನು ಕೊರೊನಾ ಲಾಕ್‌ಡೌನ್‌ ಪೂರ್ವದಂತೆ ಮಧ್ಯರಾತ್ರಿ ಬಳಿಕ 1.30ರ ವರೆಗೆ ಮರುಸ್ಥಾಪಿಸಲು
ಪ್ರಯತ್ನಿಸಲಾಗುವುದು. ನ್ಯಾಯಾಲಯದಲ್ಲಿ ನಮ್ಮ ಪ್ರಯತ್ನಗಳ ಮೂಲಕ ಅಬಕಾರಿ ಇಲಾಖೆಯು ಪರವಾನಿಗೆ ಶುಲ್ಕದ ಶೇ. 50ರಷ್ಟು ಪಾವತಿಸುವ ಮೂಲಕ ವ್ಯವಹಾರವನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಎಲ್ಲ ಪರ್ಮಿಟ್‌ ರೂಮ್‌ ಸದಸ್ಯರಿಗೆ ತಿಳಿಸಿದ ಅನಂತರ ನಾವು ಶೇ. 50ರಷ್ಟು ಪರವಾನಿಗೆ  ಶುಲ್ಕವನ್ನು ಪಾವತಿಸಿದ ಎಫ್‌ಎಲ್‌-3 ಪರವಾನಿಗೆಗಳ ಪಟ್ಟಿಯನ್ನು ಸಲ್ಲಿಸಿದ್ದೇವೆ. ಶೇ. 50ರಷ್ಟು ಪರವಾನಿಗೆ ಶುಲ್ಕ ಪಾವತಿಸುವ ಎಲ್ಲ ಪರ್ಮಿಟ್‌ ರೂಮ್‌ ಹೊಟೇಲ್‌ಗ‌ಳಿಗೆ ವ್ಯಾಪಾರ ಪುನರಾರಂಭಿಸಲು ಅವಕಾಶ ನೀಡುವಂತೆ ನಾವು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ತಿಳಿಸಿದರು.

ನ. 9ರಂದು ನಾನಾ ಚೌಕ್‌ನ ಹೊಟೇಲ್‌ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯಲ್ಲಿ ನಡೆದ ಆಹಾರ್‌ನ 6ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಎಫ್‌ ಡಿಎ ಕಮಿಷನರ್‌ ಪರಿಮಳ್‌ ಸಿಂಗ್‌ ಮತ್ತು ಅವರ ತಂಡದೊಂದಿಗೆ ಸಭೆ ನಡೆಸಿದ್ದು, ಉತ್ತಮ ಸಹಕಾರ ದೊರೆತಿದೆ. ಸೆಲ್ಫ್-ಆಡಿಟ್‌, ಹೈಜೆನಿಕ್‌ ಟೆಸ್ಟಿಂಗ್‌ ಇತ್ಯಾದಿಗಳಿಗೆ ಅವಕಾಶ ನೀಡಲಾಗಿದ್ದು, ಇದರ ಫಲಿತಾಂಶ ಶೇ. 80ಕ್ಕಿಂತ ಹೆಚ್ಚಿದ್ದರೆ ಎಫ್‌ಡಿಎ ಅಧಿಕಾರಿಗಳು ರೆಸ್ಟೋರೆಂಟ್‌ಗಳಿಗೆ ಕಿರುಕುಳ ನೀಡುವುದಿಲ್ಲ.

ಎಲ್ಲ ಹೊಟೇಲ್‌ ಉದ್ಯಮಿಗಳು ತಮ್ಮ ಓರ್ವ ಅಥವಾ ಇಬ್ಬರು ಸಿಬಂದಿಯನ್ನು FOSTAC ಅಡಿಯಲ್ಲಿ ತರಬೇತಿ ಪಡೆಯುವಂತೆ ಪ್ರೇರೇಪಿಸಬೇಕು. ಅವರು ತರಬೇತಿ ಪಡೆದ ಬಳಿಕ ಇತರರಿಗೆ ತರಬೇತಿ ನೀಡಲು ಸಹಕಾರಿಯಾಗುತ್ತದೆ. ಇದರಿಂದ ನಿಯಮಗಳ ಪ್ರಕಾರ ದಾಖಲೆಗಳನ್ನು ನಿರ್ವ ಹಿಸಬಹುದು ಎಂದು ಸಲಹೆ ನೀಡಿದರು.

ಆಹಾರ್‌ನ 42ನೇ ವಾರ್ಷಿಕ ಮಹಾಸಭೆ 2022ರ ಜ. 10 ಮತ್ತು 11ರಂದು ಪೊವಾಯಿಯ ಹೊಟೇಲ್‌ ರೆನೈಸ್ಸಾನ್ಸ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ ಶಿವಾನಂದ ಶೆಟ್ಟಿ ಅವರು, ಜ. 10ರಂದು ಸದಸ್ಯರು ಮತ್ತು ಅವರ ಕುಟುಂಬದವರಿಗೆ ಸ್ನೇಹ ಕೂಟವನ್ನು ಆಯೋಜಿಸಲಾಗಿದ್ದು, ಜ. 11ರಂದು ಸಂಸ್ಥೆಯ ವಾರ್ಷಿಕ ಮಹಾಸಭೆ ನೆರವೇರಲಿದೆ. ಆಹಾರ್‌ ನಿಯೋಗವು ಪರ್ಫಾ ರ್ಮೆನ್ಸ್‌ ಬಾರ್‌ಗಳ ಕುಂದುಕೊರತೆಗಳ ಬಗ್ಗೆ ಮುಂಬಯಿ ಪೊಲೀಸ್‌ ಕಮಿಷನರ್‌ ಮತ್ತು ಅವರ ತಂಡವನ್ನು ಭೇಟಿ ಮಾಡಿದ್ದು, ಈ ಸಭೆ ಅತ್ಯಂತ ಫಲಪ್ರದವಾಗಿತ್ತು.

Advertisement

ಕೋವಿಡ್‌ ಲಾಕ್‌ಡೌನ್‌ ಪರಿಸ್ಥಿತಿಗಳು ಮತ್ತು ಉದ್ಯಮದ ನಿಧಾನಗತಿಯ ಚೇತರಿಕೆಯನ್ನು ಗಮನಿಸಿದರೆ ಕಳೆದ ಎಜಿಎಂನಲ್ಲಿ ಪರಿಷ್ಕೃತ, ಹೆಚ್ಚಿದ ಸದಸ್ಯತನ ಶುಲ್ಕದ ಬಗ್ಗೆ ಅನುಮೋದಿಸಿದರೂ ಕೋವಿಡ್‌ ಪರಿಸ್ಥಿತಿಯಿಂದಾಗಿ ಹಿಂದಿನಂತೆ ಸದಸ್ಯತ್ವವನ್ನು ಹೊಂದಲು 2022ರ ಮಾರ್ಚ್ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿ, ಸಂಸ್ಥೆಯ ಕಾರ್ಯಗಳಿಗೆ ಎಲ್ಲರ ಸಹಕಾರವನ್ನು ಬಯಸಿದರು.

ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ಅವರು ಸದಸ್ಯರನ್ನು ಸ್ವಾಗತಿಸಿದರು. ಸಭೆಯ ಆಯೋಜಕರಾದ ವಲಯ ಮೂರರ ಉಪಾಧ್ಯಕ್ಷ ವಿಜಯ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದಸ್ಯರ ಎಲ್ಲ ಕುಂದುಕೊರತೆಗಳನ್ನು ಪರಿಹರಿಸಲು ಕಳೆದ ವರ್ಷಗಳಲ್ಲಿ ತನಗೆ ನೀಡಿದ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಆಹಾರ್‌ ಹೊಟೇಲ್‌ ಉದ್ಯಮದ ಧ್ವನಿಯಾಗಿದೆ. ಇದು ಸದಸ್ಯ ಬಾಂಧವರ ಸಮಸ್ಯೆಗಳನ್ನು ಪರಿಹರಿಸಲು ಹಗಲಿರುಳು ಶ್ರಮಿಸುತ್ತಿದೆ. ಇದರಿಂದ ಉದ್ಯಮದ ನೀತಿಗಳಲ್ಲಿ ಬದಲಾವಣೆ ಯನ್ನು ಉಂಟುಮಾಡಬಹುದು. ಇದು ಮುಂಬಯಿಗೆ ಮಾತ್ರವಲ್ಲದೆ ಇಡೀ ಮಹಾರಾಷ್ಟ್ರಕ್ಕೂ ಅನ್ವಯಿಸುತ್ತದೆ ಎಂದರು.

ಈ ಸಂದರ್ಭ ಉಪ ಸಮಿತಿಯ ಅಧ್ಯಕ್ಷರಾದ ಶಶಿಕಾಂತ ಶೆಟ್ಟಿ, ಮಹೇಶ್‌ ಶೆಟ್ಟಿ, ಪ್ರಸಾದ್‌ ಎಂ. ಶೆಟ್ಟಿ ಮತ್ತು ಗುರುಪ್ರಸಾದ್‌ ಶೆಟ್ಟಿ ಅವರು ಸಂಬಂಧಪಟ್ಟ ವಿಷಯಗಳ ಕುರಿತು ಮಾತನಾಡಿದರು. ಶಶಿಕಾಂತ ಶೆಟ್ಟಿ ಅವರು ಸಂಸ್ಥೆಯ ಸದಸ್ಯರು, ಉದ್ಯೋಗಿಗಳು ತಮ್ಮ ಆಸಕ್ತಿಯಿಂದ ತರಬೇತಿಗೆ ಹಾಜರಾಗಿ ತರಬೇತಿ ಪಡೆಯುವಂತೆ ಮನವಿ ಮಾಡಿದರು.

ಆಹಾರ್‌ನ ಸದಸ್ಯತ್ವ ಸಮಿತಿಯ ಅಧ್ಯಕ್ಷ ಪ್ರಸಾದ್‌ ಎಂ. ಶೆಟ್ಟಿ ಮಾತನಾಡಿ, ಪ್ರತಿಕೂಲ ಕೋವಿಡ್‌ ಪರಿಸ್ಥಿತಿಗಳ ನಡುವೆಯೂ ನಾವು ಇಲ್ಲಿಯವರೆಗೆ ಸದಸ್ಯತ್ವವಾಗಿ 43,20,000 ರೂ. ಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ವಾರ್ಷಿಕ ಮಹಾಸಭೆಯವರೆಗೆ ಇದನ್ನು 60 ಲಕ್ಷ ರೂ.ಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಸಲಹೆಗಾರರಾದ ಸಂತೋಷ್‌ ರಾಜು ಶೆಟ್ಟಿ ಮತ್ತು ಸಂತೋಷ್‌ ರಾಮಣ್ಣ ಶೆಟ್ಟಿ ಅವರು ಉತ್ತಮ ಕೆಲಸಕ್ಕಾಗಿ ತಂಡವನ್ನು ಅಭಿನಂದಿಸಿ, ತಮ್ಮ ಅಮೂಲ್ಯವಾದ ಸಲಹೆ ನೀಡಿದರು. ಈ ಸಂದರ್ಭ ಸಭೆಯ ಆಯೋಜಕರಾದ ವಿಜಯ್‌ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ವಲಯ ಮೂರರ ತಂಡದಿಂದ ಆಹಾರ್‌ನ ಅಧ್ಯಕ್ಷರನ್ನು ಅವರ ಸಹಕಾರಕ್ಕಾಗಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ವಂದಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಲಯಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next