ನೆಲಮಂಗಲ: ಮುಜರಾಯಿಇಲಾಖೆಗೆ ಸೇರಿದ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಕ್ಷೇತ್ರದಲ್ಲಿನ ಪಾರ್ಕಿಂಗ್ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದ್ದು, ಭಕ್ತರ ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಹಶೀಲ್ದಾರ್ ದಿಢೀರ್ ದಾಳಿ ನಡೆಸುತ್ತಿದ್ದಂತೆ ಪಾರ್ಕಿಂಗ್ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.
ಇತಿಹಾಸ ಪ್ರಸಿದ್ಧ ಗಿರಿಯ ತಾಣವಾಗಿರುವ ಶಿವಗಂಗೆ ಬೆಟ್ಟ ಸುಂದರ ಪ್ರಕೃತಿಯನ್ನು ಹೊಂದಿದೆ. ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ರೀತಿಯ ಆಕೃತಿಯಲ್ಲಿ ಕಾಣುವುದರಿಂದ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲು ಅನೇಕ ಸೌಲಭ್ಯಗಳನ್ನು ಟೆಂಡರ್ ಮಾಡುವ ಮೂಲಕ ಗುತ್ತಿಗೆ ನೀಡಲಾಗುತ್ತಿದೆ. ಅದರಲ್ಲಿ ಪಾರ್ಕಿಂಗ್ ಸೌಲಭ್ಯವೂ ಸೇರಿದೆ.
ಶಿವಗಂಗೆ ಬೆಟ್ಟದ ಪ್ರವೇಶಕ್ಕೆ ಮೂರು ಕಡೆಯಿಂದ ರಸ್ತೆಯಿದ್ದು, ಪ್ರಮುಖವಾಗಿ ದಾಬಸ್‌ಪೇಟೆ ಮತ್ತು ಮಾಗಡಿ ರಸ್ತೆ ಗಳಿವೆ. ಆದ್ದರಿಂದ, ಮುಜಾರಾಯಿ ಇಲಾಖೆ ಪ್ರವಾಸಿಗರ ವಾಹನ ನಿಲುಗಡೆಗೆ ಸುಸಜ್ಜಿತ ಜಾಗವನ್ನು ಗುರುತಿಸಿ, ಶುಲ್ಕ ವಸೂಲಿಗೆ ಟೆಂಡರ್ ಕರೆದು ನಿಯಮಿತ ಶುಲ್ಕ ವಸೂಲಿ ಮಾಡುವಂತೆ ಆದೇಶಿಸಿದೆ. ಆದರೆ, ಟೆಂಡರ್‌ದಾರರು ಸರ್ಕಾರಕ್ಕೆ ಚೆಳ್ಳೆಹಣ್ಣು ತಿನ್ನಿಸಿ ನಿಗದಿಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುವ ಜೊತೆಗೆ ಬೆಟ್ಟದ ಪ್ರವೇಶಕ್ಕೆ ಸುಂಕ ವಸೂಲಿ ಮಾಡುತ್ತಿದ್ದಾರೆ.
ಸರ್ಕಾರದ ಆದೇಶ: ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯದಲ್ಲಿ 2018-19 ನೇ ಸಾಲಿನ ಜಾತ್ರಾ ಹರಾಜಿನಲ್ಲಿ ವಾಹನ ಗಳಿಂದ ಸುಂಕ ವಸೂಲಾತಿಗೆ ಸರ್ಕಾರ ದಿಂದ ದರ ನಿಗದಿ ಮಾಡಲಾಗಿತ್ತು. ಬಸ್ ಮತ್ತು ಲಾರಿಗಳಿಗೆ 50 ರೂ., ಕಾರು, ಜೀಪು, ಆಟೋಗೆ 30ರೂ., ಮೋಟರ್ ಸೈಕಲ್‌ಗಳಿಗೆ 15 ರೂ. ಸುಂಕ ಪಡೆಯ ಬೇಕು ಎಂದು ಸರ್ಕಾರ ಆದೇಶಿಸಿತ್ತು. ಆದರೆ, ಟೆಂಡರ್‌ದಾರರು ಹಣ ಹೆಚ್ಚು ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾರೆ.
ಗೋಲ್‌ಮಾಲ್: ಶಿವಗಂಗೆ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಆಗಮಿಸುತ್ತವೆ. ಪಾರ್ಕಿಂಗ್ ಸೌಲಭ್ಯ ಕ್ಕಾಗಿ ಹಾಗೂ ದೇವಸ್ಥಾನದ ರಸ್ತೆ ಕಡೆ ಚಲಿಸುತ್ತೇನೆ ಎಂದರೆ ಬಸ್, ಲಾರಿಗೆ 100 ರೂ., ಜೀಪು, ಆಟೋಗೆ 50 ರೂ., ಮೋಟರ್ ಸೈಕಲ್‌ಗಳಿಗೆ 20 ರೂ. ಅನ್ನು ಟೆಂಡರ್ ಪಡೆದ ಚಂದ್ರಕುಮಾರ್ ಹೆಚ್ಚು ಹಣ ವಸೂಲಿ ಮಾಡುವ ಜೊತೆಗೆ ಎರಡು ರೀತಿಯ ಬಿಲ್‌ಗಳನ್ನು ಇಟ್ಟು ಕೊಂಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡುವ ವರಿಗೆ ಸರ್ಕಾರದ ಆದೇಶರುವ ಬಿಲ್ ನೀಡುವುದು, ಉಳಿದವರಿಗೆ ತಾವು ಸೃಷ್ಟಿಸಿಕೊಂಡ ಬಿಲ್ ನೀಡುವ ಮೂಲಕ ಲಕ್ಷಾಂತರ ರೂ. ಗೋಲ್‌ಮಾಲ್ ಮಾಡಿದ್ದಾರೆ.
ತಹಶೀಲ್ದಾರ್ ದಾಳಿ: ನೆಲಮಂಗಲ ತಾಲೂಕಿನ ಶಿವಗಂಗೆ ಕ್ಷೇತ್ರದಲ್ಲಿನ ಪಾರ್ಕಿಂಗ್‌ನಲ್ಲಿ ನಡೆಯುತ್ತಿದ್ದ ಗೋಲ್ ಮಾಲ್ ಬಗ್ಗೆ ಮಾಹಿತಿ ತಿಳಿದು ತಹಶೀಲ್ದಾರ್ ದಿಢೀರ್ ದಾಳಿ ಮಾಡುತ್ತಿದ್ದಂತೆ, ಪಾರ್ಕಿಂಗ್ ಟೆಂಡರ್ ಪಡೆದ ಸಿಬ್ಬಂದಿ ಬಿಲ್ಲಿನ ಪುಸ್ತಕಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ದಾಳಿ ನಡೆಸಿದ ತಹಶೀಲ್ದಾರ್ ಕೆ.ಎನ್ ರಾಜಶೇಖರ್ ಮಾತನಾಡಿ, ಶಿವಗಂಗೆಗೆ ಬರುವ ಪ್ರವಾಸಿಗರಿಗೆ ಟೆಂಡರ್‌ಗಿಂತ ಹೆಚ್ಚು ಹಣ ಸ್ವೀಕ ರಿಸುತ್ತಿದ್ದ ಬಗ್ಗೆ ಪರಿಶೀಲಿ ಸಿದಾಗ ಸತ್ಯಾಂಶ ತಿಳಿದಿದ್ದು, ಮುಂದಿನ ಆದೇಶ ದವರೆಗೂ ಸುಂಕ ವಸೂಲಾತಿ ಮಾಡ ದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕಷ್ಟಗಳ ನಿವಾರಣೆಗಾಗಿ ದೇವಾಲಯಗಳಿಗೆ ಬರುವ ಭಕ್ತರಿಗೆ ಟೆಂಡರ್ ದಾರರು ಮಾಡುತ್ತಿದ್ದ ಮೋಸ ತಡವಾಗಿ ಬೆಳಕಿಗೆ ಬಂದಿದ್ದು, ಈಗಲಾದರೂ ಸಂಬಂಧಪಟ್ಟ ಮುಜರಾಯಿ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸು ತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.