ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸುವೇಂದು ಅಧಿಕಾರಿ, ರಾಜ್ಯದ ಪರಿಸ್ಥಿತಿ ಉಕ್ರೇನ್‌ಗಿಂತ ಕೆಟ್ಟದಾಗಿದೆ ಎಂದು ಸೋಮವಾರ ಹೇಳಿದ್ದಾರೆ.
ರಾಜ್ಯದಲ್ಲಿ ಅಕ್ರಮ ಪಟಾಕಿಗಳಿಗೆ ಸಂಬಂಧಿಸಿದ ಮತ್ತೊಂದು ಸ್ಫೋಟ ವರದಿಯಾದ ನಂತರ ಬಿಜೆಪಿ ನಾಯಕ ಸುವೇಂದು ಈ ಹೇಳಿಕೆ ನೀಡಿದ್ದಾರೆ.
“ಪಶ್ಚಿಮ ಬಂಗಾಳದ ಸ್ಥಿತಿಯು ಉಕ್ರೇನ್ ಗಿಂತ ಕೆಟ್ಟದಾಗಿದೆ. ಉಕ್ರೇನ್ ನಲ್ಲಿ ಸ್ಫೋಟಗಳ ಸಂಖ್ಯೆ ಬಂಗಾಳಕ್ಕಿಂತ ಕಡಿಮೆಯಾಗಿದೆ. ಅಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತಿಯುತವಾಗಿದೆ, ಆದರೆ ಬಂಗಾಳದಲ್ಲಿ ಸ್ಫೋಟಗಳು ನಡೆಯುತ್ತಿವೆ” ಎಂದು ಸುವೇಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ:RRR ಸಿನಿಮಾದ ಖಳ ನಟ ರೇ ಸ್ಟೀವನ್ಸನ್ ಇನ್ನಿಲ್ಲ
ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಸುಪ್ರೀಂ ಕೋರ್ಟ್ ತನಿಖೆಯ ಬಗ್ಗೆ ಮಾತನಾಡಿದ ಸುವೇಂದು, ‘ಕಾನೂನು ಎಲ್ಲರಿಗೂ ಒಂದೇ. ಹಾಗಾದರೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮಮತಾ ಬ್ಯಾನರ್ಜಿ ಅವರನ್ನು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಕಲ್ಲಿದ್ದಲು ಮತ್ತು ಹಸು ಕಳ್ಳಸಾಗಣೆ ಪ್ರಕರಣದಲ್ಲಿ ಏಕೆ ಬಿಟ್ಟಿವೆ?” ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸುವೇಂದು ಅಧಿಕಾರಿ, ‘ಪ್ರಧಾನಿ ನರೇಂದ್ರ ಮೋದಿ ಅವರು 400ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದ್ದಾರೆ” ಎಂದರು.