ಮುಂಬೈ: ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಕೊನೆಗೂ ತಂಡದ ನಾಯಕತ್ವ ಬದಲಾವಣೆಯ ಕುರಿತಂತೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಕ್ಕಿಳಿಸುವಾಗ ಪರಿಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಬೇಕಾಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
ಮೂರು ಮಾದರಿ ತಂಡಕ್ಕೆ ನಾಯಕನಾಗಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಗೂ ಮೊದಲು ಚುಟುಕು ಮಾದರಿ ತಂಡದ ನಾಯಕತ್ವಕ್ಕೆ ವಿದಾಯ ಘೋಷಣೆ ಮಾಡಿದ್ದರು. ಇತ್ತೀಚೆಗೆ ಏಕದಿನ ತಂಡದ ನಾಯಕತ್ವವನ್ನೂ ವಿರಾಟ್ ಬದಲಿಗೆ ರೋಹಿತ್ ಗೆ ನೀಡಲಾಗಿದೆ.
ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ20 ತಂಡದ ನಾಯಕತ್ವ ತ್ಯಜಿಸದಂತೆ ನಾನು ವಿರಾಟ್ ಗೆ ಮನವಿ ಮಾಡಿದ್ದೆ. ಆದರೆ ಆತ ಕೇಳಲಿಲ್ಲ” ಎಂದಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ” ನನ್ನಲ್ಲಿ ನಾಯಕತ್ವ ತ್ಯಜಿಸದಂತೆ ಯಾರು ಕೇಳಿಕೊಂಡಿರಲಿಲ್ಲ” ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಕುಲದೀಪ್ ವಿಚಾರದಲ್ಲಿ ರವಿ ಶಾಸ್ತ್ರಿ- ರವಿಚಂದ್ರನ್ ಅಶ್ವಿನ್ ನಡುವಿನ ಮಾತಿನ ಸಮರ
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರವಿ ಶಾಸ್ತ್ರಿ, “ ಕಥೆಯ ತನ್ನ ಭಾಗವನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ, ಇನ್ನು ಬಿಸಿಸಿಐ ಅಧ್ಯಕ್ಷರು ಅವರ ಭಾಗವನ್ನು ಹೇಳಬೇಕಿದೆ. ಈ ಪರಿಸ್ಥಿತಿಯನ್ನು ಉತ್ತಮ ಮಾತುಕತೆಯಿಂದ ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು” ಎಂದಿದ್ದಾರೆ.