ಮೈಸೂರು: ತಾಲೂಕಿನ ಇಲವಾಲ ಹೋಬಳಿಯ ಗುಂಗ್ರಾಲ್ ಛತ್ರ ಗ್ರಾಮದ ಬಳಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ನಿಸರ್ಗ ಬಡಾವಣೆಗೆ ಜಮೀನು ನೀಡಿರುವ ಭೂ ಮಾಲೀಕರಿಗೆ ಕನಿಷ್ಠ ದರದಲ್ಲಿ ಪ್ರತಿ ಎಕರೆಗೆ ಒಂದು ನಿವೇಶನ ಕೊಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೆಎಚ್‌ಬಿ ಬಡಾವಣೆಗೆ ಭೂಮಿ ನೀಡಿದ ರೈತರೊಂದಿಗೆ ಸಭೆ ನಡೆಸಿದ ಅವರು ಜಮೀನು ನೀಡಿದ ರೈತರಿಗೆ ನಿವೇಶನ ನೀಡುವುದಾಗಿ ತಿಳಿಸಿದರು.
2008ರಲ್ಲಿ ನಾನೇ ವಸತಿ ಸಚಿವನಾಗಿದ್ದಾಗ ಅಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡರ ಒತ್ತಾಸೆ ಮೇರೆಗೆ ಗುಂಗ್ರಾಲ್ ಛತ್ರ, ಯಲಚನಹಳ್ಳಿ, ಕಲ್ಲೂರು-ನಾಗನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ 496 ಎಕರೆ ಜಮೀನನ್ನು ಪ್ರತಿ ಎಕರೆಗೆ 36 ಲಕ್ಷ ರೂ. ನೀಡಿ ಸ್ವಾಧೀನ ಪಡಿಸಿ ಕೊಳ್ಳಲಾಯಿತು. ಬೆಂಗಳೂರಿನ ಸೂರ್ಯನಗರ ಬಡಾವಣೆಗೆ ಪ್ರತಿ ಎಕರೆಗೆ 35 ಲಕ್ಷ ರೂ.ಗೆ ಭೂ ಸ್ವಾಧೀನಪಡಿಸಿಕೊಂಡರೆ, ಇಲ್ಲಿ 36 ಲಕ್ಷ ರೂ. ನೀಡಿ ಸ್ವಾಧೀನಪಡಿಸಿಕೊಳ್ಳಲಾಯಿತು.
ಆದರೆ, ರೈತರಿಂದ ಎಕರೆಗೆ 6 ಲಕ್ಷ, 10 ಲಕ್ಷಕ್ಕೆ ಜಿಪಿಎ ಮಾಡಿಸಿಕೊಂಡು ಮಧ್ಯವರ್ತಿಗಳು ಗೃಹಮಂಡಳಿಗೆ ಮಾರಿದ್ದರಿಂದ ರೈತರ ಕೈ ಸೇರಬೇಕಾದ ಹಣ, ಯಾರ್ಯಾರ ಮನೆಯೋ ಸೇರಿತು, ಗೃಹಮಂಡಳಿ ಪ್ರತಿ ಎಕರೆಗೆ 36 ಲಕ್ಷ ಕೊಟ್ಟರೂ ರೈತರಿಗೆ ಎಷ್ಟು ತಲುಪಿದೆಯೋ ಗೊತ್ತಿಲ್ಲ. ಈ ಬಗ್ಗೆ ಸುಮಾರು 350 ಕೇಸ್‌ಗಳು ನಡೆಯಿತು. ಇದರಿಂದಾಗಿ ರೈತರಿಂದ ಜಿಪಿಎ ಮಾಡಿಸಿಕೊಂಡ ಜಮೀನನ್ನು ಗೃಹಮಂಡಳಿ ಖರೀದಿಸಲ್ಲ ಎಂಬ ತೀರ್ಮಾನ ಮಾಡಲಾಯಿತು ಎಂದರು.
ಬಡಾವಣೆಗೆ ಜಮೀನು ನೀಡಿದ ರೈತರನ್ನು ಯಾಮಾರಿಸಿ, ಅವರ ಆಸ್ತಿಕಿತ್ತುಕೊಂಡು ಅವರನ್ನು ರಸ್ತೆಯಲ್ಲಿ ನಿಲ್ಲಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ರೈತರ ಮನವಿ ಮೇರೆಗೆ ಭೂಮಿ ನೀಡಿದವರಿಗೆ ನಿವೇಶನ ನೀಡುವ ಸಂಬಂಧ ಈ ಹಿಂದಿನ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಒಪ್ಪಿಗೆ ಸಿಕ್ಕಿಲ್ಲ. ತಾವು ಮುಖ್ಯಮಂತ್ರಿಯವರನ್ನು ಒಪ್ಪಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಲು ಬದ್ಧವಾಗಿರುವುದಾಗಿ ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕೆಎಚ್‌ಬಿ ಅಧ್ಯಕ್ಷನಾಗಿ ಉತ್ತಮ ಬಡಾವಣೆ ನಿರ್ಮಿಸಲು ಮುಂದಾದಾಗ ಮಧ್ಯವರ್ತಿಗಳು ಎಂದು ನನ್ನ ಮುಖಕ್ಕೆ ಮಸಿ ಬಳಿದರು. ಜಮೀನು ಕೊಟ್ಟವರನ್ನೂ ನಾನು ನೋಡಲಿಲ್ಲ. ಆದರೂ ಅಪವಾದ ಹೊರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಈ ಬಡಾವಣೆಗೆ ಮೂಲಸೌಕರ್ಯ ಒದಗಿಸಿದಾಗ ಸುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಯವರೆಗೆ ಟೌನ್‌ಶಿಪ್ ಬೆಳೆಯುತ್ತೆ. ರೈತರು ಕಡಿಮೆ ಬೆಲೆಗೆ ಜಮೀನು ಮಾರಿಕೊಂಡಿದ್ದೀರಿ ಎಂಬ ಕಾರಣಕ್ಕೆ ಪರಿಹಾರ ಕೊಡಲು ಸರ್ಕಾರ ಮುಂದಾಗಿದೆ ಎಂದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಗೃಹ ಮಂಡಳಿ ಅಧಿಕಾರಿಗಳು ಸಭೆಯಲ್ಲಿದ್ದರು.
ಕನಿಷ್ಠ ದರ ನಿಗದಿ: ಒಂದು ಎಕರೆಗಿಂತ ಕಡಿಮೆ ಜಮೀನು ಕೊಟ್ಟಿದ್ದವರಿಗೆ 20-30 ಅಡಿ ವಿಸ್ತೀರ್ಣದ ನಿವೇಶನಕ್ಕೆ 50 ಸಾವಿರ ರೂ., 30-40 ಅಡಿ ವಿಸ್ತೀರ್ಣದ ನಿವೇಶನಕ್ಕೆ 1ಲಕ್ಷ ರೂ. ನಿಗದಿಪಡಿಸಲಾಯಿತು. ಬಡಾವಣೆಯಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳನ್ನು ಕೇಳುವಂತಿಲ್ಲ. ಮೂಲೆ ನಿವೇಶನ ಮತ್ತು ಸಿಎ ನಿವೇಶನಗಳನ್ನು ಹೊರತುಪಡಿಸಿ ಉಳಿಕೆ 3000 ನಿವೇಶನಗಳನ್ನು ಕೊಡಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ತೆಂಗು, ಮಾವು ಮೊದಲಾದ ಮರಗಳಿದ್ದ ಜಮೀನು ಮಾಲೀಕರಿಗೆ ತೋಟಗಾರಿಕೆ ಇಲಾಖೆ ಮಾರ್ಗಸೂಚಿ ಪ್ರಕಾರ ಪರಿಹಾರ ಕೊಡಿಸುವುದಾಗಿ ಹೇಳಿದರು. ಬಡಾವಣೆಯಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳ ತೆರವಿಗೆ ನಾಳೆಯಿಂದ ಸಮರೋಪಾದಿಯಲ್ಲಿ ಕೆಲಸ ನಡೆಯಲಿದೆ. ಮುಂದಿನ ಆರು ತಿಂಗಳಲ್ಲಿ ಬಡಾವಣೆಗೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡುವುದಾಗಿ ತಿಳಿಸಿದರು.