ನಿರ್ದೇಶಕ ಸೀತಾರಾಮ್ ಕಾರಂತ್ ಅವರೀಗ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಒಂದು ಗ್ಯಾಪ್‌ನಲ್ಲಿದ್ದ ಸೀತಾರಾಮ್ ಕಾರಂತ್, “ಚಿತಾಯು’ ಎಂಬ ಹೊಸ ಪ್ರಯೋಗದ ಚಿತ್ರ ಮಾಡುವ ಮೂಲಕ ಪುನಃ ಸುದ್ದಿಯಾಗಿದ್ದಾರೆ. ಇನ್ನು, ಈ ಚಿತ್ರದಲ್ಲಿ ಉಮೇಶ್ ಬಣಕಾರ್ ಮುಖ್ಯ ಆಕರ್ಷಣೆ. ಇಡೀ ಚಿತ್ರದಲ್ಲಿ ಉಮೇಶ್ ಬಣಕಾರ್ ಆವರಿಸಿದ್ದು, ಈ ಚಿತ್ರದ ನಿರ್ಮಾಣವನ್ನೂ ಅವರೇ ಮಾಡಿರುವುದು ಇನ್ನೊಂದು ವಿಶೇಷ.
ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸೀತಾರಾಮ್ ಕಾರಂತ್ ಅವರ ಈ “ಚಿತಾಯು’ ವಿಶೇಷತೆಗಳಲ್ಲೊಂದು. ಕಾರಣ, ಇಡೀ ಚಿತ್ರದಲ್ಲಿ ಅರ್ಧ ಗಂಟೆ ಮಾತ್ರ ಡೈಲಾಗ್ ಕೇಳಿಬರುತ್ತೆ. ಅದು ಬಿಟ್ಟರೆ, ಚಿತ್ರಕ್ಕೆ ಹಿನ್ನೆಲೆ ಸಂಗೀತವೇ ಜೀವಾಳ. ಇದೊಂದು ಪಕ್ಕಾ ಹಿನ್ನೆಲೆ ಸಂಗೀತದ ಚಿತ್ರ ಎನ್ನುವ ನಿರ್ದೇಶಕರು, ಇಲ್ಲಿ ಒಂದು ಗಂಟೆಗೆ ಕೇವಲ 25 ಡೈಲಾಗ್‌ಗಳನ್ನು ಮಾತ್ರ ಕೇಳಬಹುದು. ಮಿಕ್ಕಿದ್ದೆಲ್ಲವೂ ಹಿನ್ನೆಲೆ ಸಂಗೀತದಲ್ಲೇ ಮೂಡಿಬಂದಿದೆ.
ಈ ಹಿಂದೆ ಸೈಕೋ ಹುಡುಗನೊಬ್ಬ ತನ್ನ ತಾಯಿಯನ್ನು ಕೊಲೆಗೈದಿದ್ದ ಸುದ್ದಿ ಪತ್ರಿಕೆಯೊಂದರಲ್ಲಿ ಬಂದಿತ್ತು. ಅಂತಹ ವ್ಯಕ್ತಿತ್ವ ಹೊಂದಿದವನ ಕಥೆ ಹೆಣೆದು, ಬೇರೇನೋ ವಿಷಯ ಹೇಳಲು ಹೊರಟಿದ್ದೇನೆ. ಒಬ್ಬ ಮಾನಸಿಕ ಅಸ್ವಸ್ಥನ ಕುರಿತಾದ ಕಥೆ ಇದು. ಬೆಳಗಾವಿ, ಗೋಕಾಕ್ ಸೇರಿದಂತೆ ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಉಮೇಶ್ ಬಣಕಾರ್ ಇಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾತ್ರದಲ್ಲೇ ತಲ್ಲೀನರಾದಂತೆ ನಟಿಸಿರುವ ಉಮೇಶ್ ಬಣಕಾರ್, ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇಲ್ಲಿ ಲವ್ ಇಲ್ಲ, ಆ್ಯಕ್ಷನ್ ಇಲ್ಲ. ಎಲ್ಲವೂ ಹೊಸ ರೀತಿಯಾಗಿ ಮೂಡಿಬಂದಿರುವ ಚಿತ್ರ. ಇಲ್ಲಿ ನಾಯಕಿ ಇಲ್ಲದಿದ್ದರೂ, ಒಬ್ಬ ಹುಡುಗಿ ಇದ್ದಾಳೆ. ಅವಳ ಪಾತ್ರವೂ ಮುಖ್ಯವಾಗಿದೆ. ಇದೊಂದು ರೀತಿ ಫ್ಯಾಮಿಲಿ ಡ್ರಾಮ. ಹಾಗಾಗಿ ಇಲ್ಲಿ ಎಲ್ಲವನ್ನೂ ಸೂಕ್ಷ್ಮತೆಯಿಂದಲೇ ಮಾಡಲಾಗಿದೆ.
ಶಕ್ತಿಗಿಂತ ಯುಕ್ತಿ ಮೇಲು ಶಕ್ತಿ ಇದ್ದರೆ, ಎಲ್ಲವನ್ನೂ ಪಡೆಯೋಕ್ಕಾಗಲ್ಲ. ಯುಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಸಾರಾಂಶ ಇಲ್ಲಿದೆ. ಚಿತ್ರದಲ್ಲಿ ಮಂಜುನಾಥ್ ಹೆಗಡೆ, ಯಮುನಾ ಶ್ರೀನಿಧಿ, ಅಶೋಕ್, ಸಾಧನಾ ಉತ್ತೇಜ್, ರವಿ ಇತರರು ನಟಿಸಿದ್ದಾರೆ. ಸೇನಾಪತಿ ಸಂಗೀತವಿದೆ. ನಾಗರಾಜ್ ಅದ್ವಾನಿ ಛಾಯಾಗ್ರಹಣ ಮಾಡಿದ್ದಾರೆ.