Advertisement
“ಅಕ್ಕಿ ಅನ್ನಾ, ಚಿಕ್ಕಿ ಸೀರೀ, ಮಕ್ಕೀ ಮಾಲೀ… ಬೆಂಗಳೂರಿನ ಹೆಣ್ಣು ಮಕ್ಕಳು ಅಂದ್ರ ಇಷ್ಟ ನೋಡು. ಪುಣ್ಯವಂತರು ಅವರು. ಏನ್ಯಾಕ ಆಗಲೀ ನಿನ್ನ ಮಗಳನ ಬೆಂಗಳೂರು ವರಕ್ಕೇ ಮದಿವಿ ಮಾಡಿ ಕೊಡು… ಇಪ್ಪತ್ತೈದು ವರ್ಷದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತನ್ನ ಓರಗಿತ್ತಿಯನ್ನು ಓರೆನೋಟದಲ್ಲಿ ನೋಡುತ್ತಾ ಅಜ್ಜಿ, ಅಪ್ಪನಿಗೆ ಹೇಳುತ್ತಿದ್ದರೆ, ನಾನು ಮುಸಿಮುಸಿ ನಗುತ್ತಿದ್ದೆ. “ಅಜ್ಜೀ ಹಂಗಂದರೇನ..?’ ಅಂದ್ರೆ ಸಾಕು, ಬೆಂಗಳೂರಿನ ಹೆಂಗಸರ ಕುರಿತಾದ ಅವಳ ಹೊಟ್ಟೆ ಕಿಚ್ಚು ಪ್ರಕಟವಾಗುತ್ತಿತ್ತು.
Related Articles
Advertisement
ಲತಕ್ಕನಿಗೆ ಮನೆತುಂಬ ಜನ, ಆಳುಕಾಳು… ಎಲ್ಲ ಕೆಲಸ ಮಾಡುವಷ್ಟರಲ್ಲಿ ಲತಕ್ಕನ ಹಸಿವೇ ಇಂಗಿ ಹೋಗಿರುತ್ತಿತ್ತು. ಇನ್ನು ಶೃಂಗಾರದ ನೆನಪೆಲ್ಲಿ ಆಗಬೇಕು ಆಕೆಗೆ? ನಾಲ್ಕು ಮಕ್ಕಳ ನಂತರ ಬತ್ತಿದ ಮುಖ, ಸೀಳಿದ ಹಸ್ತಪಾದಗಳು ಗಂಡನಲ್ಲಿ ಯಾವ ಆಸಕ್ತಿಯನ್ನೂ ಹುಟ್ಟಿಸುವ ಹಾಗಿರದ ಕಾರಣ, ಪ್ರಣಯಪ್ರಸಂಗಗಳಂತೂ ಆಕೆಗೆ ಮರೆತೇ ಹೋಗಿದ್ದವು. ಅಂತಹುದರಲ್ಲಿ ಚಿಕ್ಕಿ ಸೀರೀ, ಮಗ್ಗೀ ಮಾಲೀ, ಗಂಡನ ತೋಳು ಹಿಡಿದು ಮಸಾಲೆ ದೋಸೆ ತಿನ್ನಲು ಹೋಗುವ ಸುಖ ನೆನೆಸಿ, ಆಕೆಗೆ ಕಣ್ಣೀರು ಬಂದದ್ದು ಸಹಜವೇ ಆಗಿತ್ತು. “ಅಯ್ಯೋ ಕಡಿಗಿ, ಮುಟ್ಟು ಸೈತ ಕೂಡೋ ಕಿರಿಕಿರಿ ಇಲ್ಲಂತರೆವಾ ಬೆಂಗಳೂರಾಗ.
ಆರಾಂ ಶೀರ ಸಾನಾ ಮಾಡಿ ಒಳಗ ಬಂದು, ಬೇಕಾದ್ದು ಮಾಡಿಕೊಂಡು ತಿಂತಾರಂತ. ಗಾದಿ ಮ್ಯಾಲೆ ಮಕ್ಕೋತಾರಂತ…’ ಇದಂತೂ ಹಿತ್ತಲಿನ ಗಿಡದಲ್ಲಿ ಬಂಗಾರ ಬೆಳೆಯುತ್ತಿದೆ ಎಂಬಷ್ಟು ಅಚ್ಚರಿಯ ಸಂಗತಿ ಎಲ್ಲರಿಗೂ. ಮೂರು ದಿನದ ಮೂಲೆ, ಬೋರಲು ಹಾಕಿದ ಚೊಂಬು, ಮಲಗುವ ಗೋಣಿತಟ್ಟು, “ಎಷ್ಟು ಸರೀ ನೀರು ಹಾಕಬೇಕು ನಿನಗೆ..?’ ಗೊಣಗುವ ಗಂಡಸರು. ಈಗಂತೂ ಎಲ್ಲರೂ ತಮ್ಮ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟರೆ ಬೆಂಗಳೂರಿಗೇ ಎಂದು ನಿರ್ಧರಿಸಿಬಿಟ್ಟಿದ್ದರು.
ಆದಾಗಿ ಇಪ್ಪತ್ತೈದು ವರ್ಷ. ಈಗ ಎಲ್ಲ ಊರುಗಳಲ್ಲಿ ಅನುಕೂಲಗಳಾಗಿವೆ. ಹೆಣ್ಣು ಮಕ್ಕಳು ಒರಳು ಕಲ್ಲು, ಬಟ್ಟೆ ಒಗೆಯೋ ಕಲ್ಲು ಬಿಟ್ಟು, ಯಾವುದೋ ಕಾಲವಾಗಿದೆ. ಎಲ್ಲರ ಮನೆಗಳಲ್ಲೂ ನಲ್ಲಿಗಳಲ್ಲಿ ನೀರು ಬಂದೇ ಬರುತ್ತದೆ. ಈಗಿನ ಕಾಲದಲ್ಲಿ ಬೆಂಗಳೂರು ಹೆಣ್ಣು ಮಕ್ಕಳಂತೆಯೇ ಎಲ್ಲ ಕಡೆಯೂ ಹೆಣ್ಣು ಮಕ್ಕಳು ಸುಖವಾಗಿಯೇ ಇದ್ದಾರೆ ಎಂದೇ ಅನಿಸುತ್ತಿತ್ತು. ಬಹುಶಃ ಈಗ ಬೆಂಗಳೂರಿನ ಹೆಣ್ಣು ಮಕ್ಕಳು ಪುಣ್ಯವಂತರು ಎನ್ನುವ ಭಾವ, ಬೇರೆ ಊರಿನ ಹೆಂಗಸರಿಗೆ ಇರಲಿಕ್ಕಿಲ್ಲ ಎಂದುಕೊಂಡಿದ್ದೆ.
ಆದರೆ, ಮೊನ್ನೆ ಚಿಕ್ಕಮ್ಮನ ಅಳಲು ಈ ಎಲ್ಲ ನಂಬಿಕೆಯನ್ನು ಬುಡಮೇಲು ಮಾಡಿತು. ಗುಲ್ಬರ್ಗದಲ್ಲಿ ಬ್ಯಾಂಕ್ ಕೆಲಸದಲ್ಲಿದ್ದ ಆಕೆಯ ಮಗನಿಗೆ ಹೆಣ್ಣೇ ಸಿಗುತ್ತಿಲ್ಲ. ಕಾರಣ, ಎಲ್ಲಾ ಹುಡುಗಿಯರಿಗೂ ಬೆಂಗಳೂರು ವರನೇ ಬೇಕು. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಹುಡುಗಿಯರ ಗುಂಪನ್ನು ಕಿಚಾಯಿಸುತ್ತಾ, “ಯಾಕ್ರೇ ಬೆಂಗಳೂರು ಹುಡುಗನೇ ಬೇಕಾ ನಿಮಗೆಲ್ಲಾ?’ ಎಂದು ಕೇಳಿದೆ. “ಹೂಂ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗರು ಸಂಭಾವಿತರು. ಹೆಂಗಸರನ್ನು ತುಂಬಾ ಮರ್ಯಾದೆಯಿಂದ ನಡೆಸಿಕೊಳ್ಳುತ್ತಾರೆ.
ಹಿರಿಯರೂ ಅಷ್ಟೇ. ವಿಶಾಲ ಮನೋಭಾವ. ಕಿರಿಕಿರಿ ಮಾಡಲ್ಲ. ಎಲ್ಲ ಅನುಕೂಲ ಇರತ್ತೆ. ನಮ್ಮೂರಲ್ಲಿ ನಲ್ಲಿ ಇದ್ದರೂ ವಾರಕ್ಕೊಮ್ಮೆ ನೀರು. ಬೇಸಿಗೆ ಬಂದ್ರೆ ನೀರು ಹೊತ್ತು, ಹೊತ್ತು ಸೊಂಟ ಬೀಳತ್ತೆ. ಆಮೇಲೆ ತಣ್ಣನೆ ಹವೆ. ಅದಂತೂ ಎಲ್ಲೂ ಸಿಕ್ಕಲ್ಲ. ಆದ್ರೆ ಮಾಡು, ಇಲ್ಲಾ ಆಚೆ ತಿಂದ್ಕೋಂಡು ಹಾಯಾಗಿರು… ಅದಕ್ಕೇ ಬೆಂಗಳೂರು ಹುಡುಗನೇ ಬೇಕು ನಮಗೆ’ ಅಂದ್ರು. ನಸುನಕ್ಕು ಸುಮ್ಮನಾದೆ. ಸುಖ ಅನ್ನುವುದು ಅತ್ಯಂತ ವ್ಯಕ್ತಿನಿಷ್ಠ ವಿಷಯ.
ಅಂತಹುದರಲ್ಲಿ ಬೆಂಗಳೂರು ಆಗಿನಿಂದ ಈಗಿನವರೆಗೂ ಇಷ್ಟು ಜನ ಹುಡುಗಿಯರ ಕನಸಿನ ನಗರವಾಗಿದೆ ಎಂಬ ವಿಷಯ ನಿಜಕ್ಕೂ ಅಚ್ಚರಿಯ ಸಂಗತಿ. ಹೌದು, ಅಕ್ಕೀ ಅನ್ನ, ಚುಕ್ಕಿಯ ಸೀರೆ, ಹಿತವಾದ ದುಂಡು ಮಲ್ಲಿಗೆ ಮಾಲೆ, ತೋಟಗಳ ವಿಹಾರ, ಹೆಂಗಸರ ಕನಸನ್ನರಿತು ನಡೆಯುವ ಮೃದು ಸ್ವಭಾವದ ಗಂಡಸರು… ಹೌದು,ಬೆಂಗಳೂರಿನ ಹೆಣ್ಣು ಮಕ್ಕಳು ನಿಜಕ್ಕೂ ಪುಣ್ಯವಂತರೇ.
* ದೀಪಾ ಜೋಶಿ