Advertisement
ಬೆಂಗಳೂರಿನಿಂದ ಆಗಮಿಸಿದ್ದ ಎಸ್‌ಐಟಿ ಟೀಂಗಳು ಹಾಸನ, ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ ಸೇರಿದಂತೆ ಹದಿನೆಂಟು ಕಡೆಗಳಲ್ಲಿ ದಾಳಿ ನಡೆಸಿ ಕೂಲಂಕಷ ಪರಿಶೀಲನೆ ನಡೆಸಿದವು.ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಕ್ವಾಲಿಟಿ ಬಾರ್‌ನ ಶರತ್, ಪುನೀತ್, ಎಚ್.ಪಿ. ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್ ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್, ಶಶಿಧರ್, ಚೇತನ್ ಗೌಡ ಹಾಗೂ ವಕೀಲ ಮತ್ತು ಬಿಜೆಪಿ ಮುಖಂಡ ದೇವರಾಜೇಗೌಡ ಮೊದಲಾದವರ ನಿವಾಸ, ಕಚೇರಿ, ರೆಸ್ಟೋರೆಂಟ್, ಹೊಟೇಲ್ ಮೊದಲಾದ ಕಡೆಗಳಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತು.
ಮುಖ್ಯವಾಗಿ ಪ್ರೀತಂ ಗೌಡ ಅವರ ಆಪ್ತರ ಒಡೆತನದ ಬಾರ್ ಹಾಗೂ ಹೊಟೇಲ್, ಕಚೇರಿ ಮೊದಲಾದ ಕಡೆಗಳಲ್ಲಿ ಎಸ್‌ಐಟಿ ದಾಳಿ ನಡೆಸಿ ಶೋಧಿಸಿದ ವೇಳೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ತಪಾಸಣೆ ವೇಳೆ ಕಂಪ್ಯೂಟರ್ ಮಾನಿಟರ್, ಹಾರ್ಡ್ ಡಿಸ್ಕ್ ಪರಿಶೀಲಿಸಿದಾಗ ಯಾವ ಸಾಕ್ಷಿಯೂ ದೊರಕಲಿಲ್ಲ ಎನ್ನಲಾಗಿದೆ. ಈ ನಡುವೆ ಮಂಗಳವಾರ ಎಸ್‌ಐಟಿ ದಾಳಿ ವೇಳೆ ಪ್ರೀತಂ ಗೌಡರ ಆಪ್ತ ಬಳಗವನ್ನೇ ಟಾರ್ಗೆಟ್ ಮಾಡಲಾಗಿದೆ. ಇದೆಲ್ಲಾ ರಾಜಕೀಯ ಷಡ್ಯಂತ್ರ ಎಂದು ಬಿಜೆಪಿಯ ಹಲವರು ದೂರಿದ್ದಾರೆ.