ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಸೋಮವಾರ ಗೌರಿ ಲಂಕೇಶ್ ಮನೆ ಬಳಿ ಕರೆದೊಯ್ದು ಘಟನೆಯನ್ನು ಮರು ಸೃಷ್ಟಿ ಮಾಡಿದ್ದಾರೆ.
ಎಸ್‌ಐಟಿಯ 15ಕ್ಕೂ ಅಧಿಕ ಅಧಿಕಾರಿಗಳು ಬೆಳಗ್ಗೆ 8.30ರಿಂದ 10.30ರವರೆಗೆ ರಾಜರಾಜೇಶ್ವರಿನಗರದಲ್ಲಿರುವ ಗೌರಿ ಲಂಕೇಶ್ ಅವರ ಮನೆ ಬಳಿ ನವೀನ್ ಕುಮಾರ್‌ನನ್ನು ಕರೆದೊಯ್ದು, ಇಡೀ ಘಟನೆಯನ್ನು ಮರು ಸೃಷ್ಟಿಸಿ, ಶಂಕಿತ ಆರೋಪಿಗೂ ಹೊಟ್ಟೆ ಮಂಜನ ಮುಖ ಚಹರೆಗೂ ಸಾಮ್ಯತೆ ಇದೆಯೇ ಎಂಬ ಬಗ್ಗೆ ಪರಿಶೀಲಿಸಿದ್ದಾರೆ.
ಗೌರಿ ಹಂತಕರು ಬಂದ ದಾರಿಯಲ್ಲಿ ಹೊಟ್ಟೆ ಮಂಜನಿಗೆ ಹೆಲ್ಮೆಟ್ ಹಾಕಿಸಿ ಬೈಕ್ ಚಾಲನೆ ಮಾಡಿಸಿದ್ದಾರೆ. ಬಳಿಕ ಮನೆ ಮುಂದೆ ಆತನನ್ನು ನಿಲ್ಲಿಸಿ ಗೌರಿಯನ್ನು ಕೊಲ್ಲುವ ಮಾದರಿಯನ್ನು ಸೃಷ್ಟಿಸಿದ್ದಾರೆ. ಅನಂತರ ಹಂತಕರು ಪರಾರಿಯಾದಂತೆ ಹೊಟ್ಟೆ ಮಂಜನ ಕಡೆಯಿಂದ ಬೈಕ್ ಚಾಲನೆ ಮಾಡಿಸಿದ್ದಾರೆ.
ಈ ಎಲ್ಲ ದೃಶ್ಯವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಗೌರಿ ಮನೆ ಬಳಿ ಪತ್ತೆಯಾದ ಸಿಸಿಟಿವಿ ದೃಶ್ಯಾವಳಿ ಹಂತಕರ ಮುಖ ಚಹರೆಗೂ ಹೊಟ್ಟೆ ಮಂಜನಿಗೂ ಸಾಮ್ಯತೆ ಇರುವ ಬಗ್ಗೆ ತುಲನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೂಂದೆಡೆ ಹೊಟ್ಟೆ ಮಂಜ ವಿಚಾರಣೆ ಸಂದರ್ಭದಲ್ಲಿ ಜೀವಂತ ಗುಂಡುಗಳನ್ನು ಉತ್ತರ ಪ್ರದೇಶದಿಂದ ತರುತ್ತಿರುವುದಾಗಿ ಹೇಳಿಕೆ ನೀಡಿದ್ದು, ಪ್ರತಿ ಗುಂಡಿಗೆ ಒಂದು ಸಾವಿರ ರೂ. ನೀಡಿ ಖರೀದಿಸಿ ಅದನ್ನು ರಾಜ್ಯದಲ್ಲಿ ಅಧಿಕ ಮೊತ್ತಕ್ಕೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.