ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ಅವರ ಬೆಂಬಲಿಗರಿಬ್ಬರನ್ನು ಬಂಧಿಸಿರುವ ಎಸ್‌ಐಟಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಪ್ರೀತಂ ಗೌಡ ಅವರ ಅಪ್ತರೆನ್ನಲಾದ ಉದ್ಯಮಿಗಳ ಹೊಟೇಲ್‌ಗಳ ಮೇಲೂ ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಪ್ರೀತಂ ಗೌಡ ಅವರ ಆಪ್ತರಾದ ಶರತ್ ಅವರ ಕ್ವಾಲಿಟಿ ಬಾರ್ ಮತ್ತು ಕಿರಣ್ ಗೌಡ ಅವರ ಶ್ರೀಕೃಷ್ಣ ಹೊಟೇಲ್ ಮೇಲೆ ದಾಳಿ ನಡೆಸಿದ ಎಸ್‌ಐಟಿ ತಂಡ ಬಾರ್ ಮತ್ತು ಹೊಟೇಲ್‌ನಲ್ಲಿರುವ ಕಂಪ್ಯೂಟರ್‌ಗಳು ಹಾಗೂ ಕಚೇರಿಯನ್ನೂ ತಪಾಸಣೆ ನಡೆಸಿತು.
ಪೈನ್‌ಡ್ರೈವ್ ಹಂಚಿಕೆ ಸಂಬಂಧ ವಕೀಲ ಪೂರ್ಣಚಂದ್ರ ತೇಜಸ್ವಿ ಅವರು ಎ. 23ರಂದು ಹಾಸನದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಆರೋಪಿಗಳಾಗಿರುವ ನಾಲ್ವರ ನಿರೀಕ್ಷಣ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆದರೆ ಕ್ವಾಲಿಟಿ ಬಾರ್ ಮಾಲಕ ಶರತ್ ಅವರು ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಎಸ್‌ಐಟಿ ದಾಳಿ ಹಿನ್ನೆಲೆಯಲ್ಲಿ ಶರತ್ ಅವರಿಗೂ ಬಂಧನದ ಭೀತಿ ಎದುರಾಗಿದೆ.
ಬಿಜೆಪಿ ಕಚೇರಿಯಲ್ಲಿ ದಾಖಲೆಗಳು ವಶ
ಹೊಳೆನರಸೀಪುರ: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ನೀಡಿದ ಹೇಳಿಕೆ ಮೇಲೆ ಎಸ್‌ಐಟಿ ತನಿಖಾ ತಂಡ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿನ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಿಜೆಪಿ ಕಚೇರಿಗೆ ಆಗಮಿಸಿದ ಎಸ್‌ಐಟಿ ತನಿಖಾ ತಂಡದ ನಾಲ್ವರು ಸದಸ್ಯರು ಕಚೇರಿಯಲ್ಲಿ ಪಂಚನಾಮೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಕೊಂಡಿದ್ದಾರೆ.