ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಸಂಬಂಧ ಬಿಜೆಪಿ ಕರ್ನಾಟಕವು ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮಾಡಿ ಮುಖ್ಯಮಂತ್ರಿಗಳ ಕಾಲೆಳೆದಿದೆ.
ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, “ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರ್. ರೋಷನ್ ಬೇಗ್ ಅವರನ್ನು ಜುಲೈ 12ರ ರಾತ್ರಿ ತಾಜ್ ವೆಸ್ಟ್‌ಎಂಡ್‌ನಲ್ಲಿ ಭೇಟಿಯಾಗಿದ್ದರು. ಕುಮಾರಸ್ವಾಮಿಯವರ ಸರ್ಕಾರಕ್ಕೆ ರೋಷನ್ ಬೇಗ್ ಅವರು ಬೆಂಬಲ ನೀಡಿರುವವರೆಗೆ ಎಲ್ಲವೂ ಸರಿಯಾಗಿತ್ತು.
ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಂತೆ ಅವಕಾಶವಾದಿ ಎಚ್.ಡಿ.ಕುಮಾರಸ್ವಾಮಿಯವರು ಆಡಳಿತ ಯಂತ್ರವನ್ನು ಬಳಸಿಕೊಂಡು ಶಾಸಕರನ್ನು ಬ್ಲಾಕ್‌ವೆುಲ್ ಮಾಡಲು ಶುರು ಮಾಡಿದ್ದಾರೆ’ ಎಂದು ಕಿಡಿ ಕಾರಿದೆ. ಇದಕ್ಕೆ ಪೂರಕವಾಗಿ ಇನ್ನೊಂದು ಟ್ವೀಟ್‌ನಲ್ಲಿ, “ಒಂದೊಮ್ಮೆ ರೋಷನ್ ಬೇಗ್ ಅವರು ಆರೋಪಿಯಾಗಿದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜು.12ರಂದು ಭೇಟಿಯಾಗಿದ್ದೇಕೆ?
ಮುಖ್ಯಮಂತ್ರಿಗಳು ತಮ್ಮ ರಹಸ್ಯ ಮಾತುಕತೆಯ ಬಗ್ಗೆ ಮುಕ್ತವಾಗಿ ವಿವರಿಸುತ್ತಿಲ್ಲ ಏಕೆ? ಎಚ್.ಡಿ.ಕುಮಾರಸ್ವಾಮಿ ತಮ್ಮ ಸರ್ಕಾರವನ್ನು ವಿರೋಧಿಸುವವರ ವಿರುದ್ಧ ಆಡಳಿತ ಯಂತ್ರ ಬಳಸಿಕೊಂಡು ಬ್ಲಾಕ್‌ವೆುಲ್ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಬಿಜೆಪಿ ಕರ್ನಾಟಕ ಆಗ್ರಹಿಸಿದೆ. ಮತ್ತೂಂದು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, “ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕಣ್ಗಾವಲಿನ ನಡುವೆಯೂ ಐಎಂಎ ಪ್ರಕರಣದ ವಂಚಕರು ಹೇಗೆ ಪರಾರಿಯಾದರು ಎಂಬುದನ್ನು ಜೆಡಿಎಸ್ ಪಕ್ಷ ರಾಜ್ಯದ ಜನತೆಗೆ ತಿಳಿಸುವುದೇ’ ಎಂದು ಪ್ರಶ್ನಿಸಿದೆ.
ಜತೆಗೆ ಮುಖ್ಯಮಂತ್ರಿಗಳು ಐಎಂಎ ಸಂಸ್ಥೆಯ ಮನ್ಸೂರ್ ಖಾನ್ ಅವರೊಂದಿಗೆ ಭೋಜನ ಸವಿಯುತ್ತಿರುವ ಛಾಯಾಚಿತ್ರ ಪೋಸ್ಟ್ ಮಾಡಿ, “ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಐಎಂಎ ವಂಚಕರೊಂದಿಗೆ ಬಿರಿಯಾನಿ ಸವಿಯುತ್ತಿರುವ ಈ ಚಿತ್ರವು ಅವರು ಪರಾರಿಯಾಗಲು ಹೇಗೆ ಯೋಜನೆ ರೂಪುಗೊಂಡಿತ್ತು ಎಂಬುದನ್ನು ವಿವರಿಸುತ್ತದೆ’ ಎಂದು ಟ್ವೀಟ್ ಮಾಡಿ ಕಾಲೆಳೆದಿದೆ.