ಬೆಂಗಳೂರು: ಇತ್ತೀಚೆಗಷ್ಟೇ ಅಪಹರಣ ಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡನನ್ನು ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿರುವುದು 7.65 ಎಂಎಂ ಕಂಟ್ರಿ ಮೇಡ್ ಪಿಸ್ತೂಲ್, ಈ ಹಿನ್ನೆಲೆಯಲ್ಲಿ ತಾಹೀರ್ ಹುಸೇನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈತ ಕೂಡ ಹೆಚ್ಚಾಗಿ 7.65 ಎಂಎಂ ಪಿಸ್ತೂಲ್‌ಗಳನ್ನೆ ಮಾರಾಟ ಮಾಡುತ್ತಿದ್ದ. ಮಹಾರಾಷ್ಟ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಈ ಪಿಸ್ತೂಲ್‌ಗಳನ್ನು ಅತೀ ಹೆಚ್ಚಾಗಿ ಮಾರಾಟ ಮಾಡುತ್ತಾರೆ.
ಜತೆಗೆ ಗೌರಿ ಹಂತಕರಿಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಯವರೇ ಪಿಸ್ತೂಲ್ ಪೂರೈಕೆ ಮಾಡಿದ್ದಾರೆ ಎಂಬ ಅನುಮಾನ ಕೂಡ ಇದೆ. ತಾಹೀರ್ ಸಹ ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿಯಲ್ಲಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
2013 ರ ಜನವರಿ 1 ರಂದು ವಿಜಯಪುರ ಜಿಲ್ಲೆ ಭೀಮಾ ತೀರದ ಹಂತಕರ ತಂಡಕ್ಕೆ ಪಿಸ್ತೂಲ್ ಪೂರೈಸಿದ ಪ್ರಕರಣದಲ್ಲಿ ಆರೋಪಿಯನ್ನು ಭಾನುವಾರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಪ್ಪನ ಅಗ್ರಹಾರ ಸಮೀಪದ ಹುಸ್ಕೂರು ರಸ್ತೆಯ ಲಾಡ್ಜ್ನಲ್ಲಿ ಬಂಧಿಸಿದ್ದರು.
ತಾಹೀರ್ ಅನೂಪ್‌ಗೌಡ ಆಗಿದ್ದು ಹೇಗೆ?: ಚಿಕ್ಕಬಳ್ಳಾಪುರದ ತಾಹೀರ್ ಹುಸೇನ್ ಅನೂಪ್‌ಗೌಡ ಆಗಲು ಲವ್ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಪಿಸ್ತೂಲ್ ಮಾರಾಟ ಮಾಡಲು ಹೋಗಿದ್ದ ವೇಳೆ ಆರೋಪಿ ಅಲ್ಲಿನ ಯುವತಿಯನ್ನು ಪರಿಚಯಿಸಿಕೊಂಡಿದ್ದಾನೆ.
ಆಕೆ ಹಿಂದೂ ಆದ್ದರಿಂದ ಆಕೆಯನ್ನು ವರಿಸಲು ತಾಹೀರ್ ಹುಸೇನ್ ತನ್ನ ಹೆಸರನ್ನು ಅನೂಪ್‌ಗೌಡ ಎಂದು ಬದಲಿಸಿಕೊಂಡು ಆಕೆಯನ್ನು ವಿವಾಹ ಕೂಡ ಆಗಿದ್ದ. ದಿನಕಳೆದಂತೆ ಆರೋಪಿ ಹಿಂದೂ ಅಲ್ಲ ಮುಸ್ಲಿಂ ಎಂದು ತಿಳಿದಿದೆ. ಜತೆಗೆ ಅಕ್ರಮ ದಂಧೆಯಲ್ಲಿ ತೊಡಗಿರುವುದೂ ಗೊತ್ತಾಗಿದೆ. ಇದರಿಂದ ನೊಂದ ಆಕೆ ತಾಹೀರ್ ಹುಸೇನ್‌ನಿಂದ ವಿಚ್ಛೇದನ ಪಡೆದು ಬೇರೆಡೆ ಜೀವನ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.