ಪಾಟ್ನ:ಫೀಸ್ ಕಟ್ಟಲಿಲ್ಲ ಎಂಬ ಕಾರಣಕ್ಕಾಗಿ ಇಬ್ಬರು ಪುಟಾಣಿ ವಿದ್ಯಾರ್ಥಿನಿಯರ ಸಮವಸ್ತ್ರ ಕಳಚಿ ಅರೆನಗ್ನ ಸ್ಥಿತಿಯಲ್ಲಿಯೇ ಮಕ್ಕಳನ್ನು ಹೊರಗಟ್ಟಿರುವ ಅಮಾನವೀಯ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಶುಲ್ಕ ಕಟ್ಟಲಿಲ್ಲ ಎಂದು ಆರೋಪಿಸಿ ಇಬ್ಬರು ಸಹೋದರಿಯರನ್ನು ಅರೆನಗ್ನಗೊಳಿಸಿ ಮನೆಗೆ ಕಳುಹಿಸಿದ್ದರು. ಒಬ್ಬಾಕೆ ನರ್ಸರಿಯ ಪುಟಾಣಿ, ಆಕೆಯ ಅಕ್ಕ ಒಂದನೇ ತರಗತಿ ವಿದ್ಯಾರ್ಥಿನಿ! ಇಬ್ಬರು ಪುಟಾಣಿ ವಿದ್ಯಾರ್ಥಿನಿಯರು ಅರೆನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪುಟ್ಟ, ಪುಟ್ಟ ಹೆಜ್ಜೆಯನ್ನಿಟ್ಟು ನಡೆದು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಆ ದೃಶ್ಯ ಕರುಳು ಚುರುಕ್ ಎನಿಸುವಂತಿದೆ.
ಕೊನೆಗೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಗ್ರಾಮಸ್ಥರು ತಮ್ಮೊಂದಿಗೆ ಕರೆದೊಯ್ದು ಮೈ ಮುಚ್ಚಿಕೊಳ್ಳಲು ಬೇರೆ ಬಟ್ಟೆಯನ್ನು ಕೊಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಈ ಘಟನೆ ಬಿಹಾರದ ರಾಜಧಾನಿ ಪಾಟ್ನದಿಂದ 125 ಕಿಲೋ ಮೀಟರ್ ದೂರದ ಬೇಗುಸರಾಯ್ ಪ್ರದೇಶದಲ್ಲಿ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರ ಪೋಷಕರು ಬಡವರಾಗಿದ್ದು, ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಹಂಬಲದಿಂದ ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಸಮವಸ್ತ್ರದ ಹಣ ಮತ್ತು ಶಾಲಾ ಫೀಸ್ ಪಾವತಿಸಲು ಹಲವು ಬಾರಿ ಗಡುವು ನೀಡಿದ್ದರೂ ಸಹ ಮಕ್ಕಳ ತಂದೆಗೆ ಸಾಧ್ಯವಾಗಿಲ್ಲವಾಗಿತ್ತು.
ಫೀಸ್ ಹಾಗೂ ಸಮವಸ್ತ್ರ ಹಣ ಪಾವತಿಸಲು ತನಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಮಕ್ಕಳ ತಂದೆ ಖಾಸಗಿ ಶಾಲೆಯ ಪ್ರಾಂಶುಪಾಲರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಮಕ್ಕಳ ತಂದೆಯ ಮನವಿ ತಿರಸ್ಕರಿಸಿ ಕೂಡಲೇ ಫೀಸ್ ಪಾವತಿಸುವಂತೆ ಸೂಚನೆ ನೀಡಿದ್ದರು ಎಂದು ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಾಲಾ ಪ್ರಾಂಶುಪಾಲರು, ಟೀಚರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.