Advertisement

ಸೋದರಿಯ ಚುಡಾಯಿಸಿದವನ ಹತ್ಯೆ

02:35 PM Aug 18, 2018 | Team Udayavani |

ಬೆಂಗಳೂರು: ಸಹೋದರಿಯನ್ನು ಚುಡಾಯಿಸಿದ ಯುವಕನನ್ನು ಯುವತಿಯ ತಂದೆ ಹಾಗೂ ತಮ್ಮ ಸೇರಿಕೊಂಡು ಕೊಲೆ ಮಾಡಿದ ಘಟನೆ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

Advertisement

ಈ ಸಂಬಂಧ ಯುವತಿಯ ತಂದೆ, ಚಂದ್ರಪ್ಪ ನಗರದ ನಿವಾಸಿ ಗಂಗಾಧರ್‌ (40), ಇವರ ಪುತ್ರ ಅರುಣ್‌ ಕುಮಾರ್‌ (18) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆ.15ರಂದು ಸಂಜೆ ಆಡುಗೋಡಿ ಬಿ.ಜಿ.ರಸ್ತೆಯ ನಿವಾಸಿ ನವೀನ್‌ ಕುಮಾರ್‌ (22) ಎಂಬಾತನನ್ನು ಇವರು ಚಾಕುವಿನಿಂದ ಇರಿದು ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಬಿಎಂಪಿಯ ಕಸ ಸಾಗಿಸುವ ಆಟೋ ಚಾಲಕ ನವೀನ್‌ ಕುಮಾರ್‌, ದಾರಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಚುಡಾಯಿಸಿದ್ದಾನೆ. ಈತನ ವರ್ತನೆಯಿಂದ ನೊಂದಿದ್ದ ಯುವತಿ ಘಟನೆಯನ್ನು ತಂದೆ ಬಳಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಗಂಗಾಧರ್‌ ಹಾಗೂ ಸಹೋದರ ಅರುಣ್‌ ಕುಮಾರ್‌, ಸಂಜೆ 6 ಗಂಟೆಗೆ ನವೀನ್‌ ಮನೆಗೆ ಹೋಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ವೇಳೆ ನವೀನ್‌ನನ್ನು ಗಂಗಾಧರ್‌ ಹಿಡಿದುಕೊಂಡರೆ, ಅರುಣ್‌ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡ ನವೀನ್‌ ಜೋರಾಗಿ ಕೂಗಿಕೊಂಡಿದ್ದು, ಮನೆಯೊಳಗಿದ್ದ ಈತನ ತಂದೆ ಸಂಜೀವ್‌ ಕುಮಾರ್‌ ಹೊರ ಬಂದು ನೋಡಿದಾಗ ಮಗ ರಕ್ತದ ಮಡುವಲ್ಲಿ ಬಿದ್ದಿದ್ದ. ತಕ್ಷಣ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನವೀನ್‌ ಮೃತಪಟ್ಟಿದ್ದಾನೆ. ಈ ಸಂಬಂಧ ಸಂಜೀವ್‌ ಕುಮಾರ್‌ ಆಡುಗೋಡಿ ಪೊಲೀಸ್‌ ಠಾಣೆಗೆ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ ವಿಚಾರವಾಗಿ ಜಗಳ: ಬೈಕ್‌ ನಿಲ್ಲಿಸುವ ವಿಚಾರವಾಗಿ ಆರೋಪಿ ಅರುಣ್‌ ಕುಮಾರ್‌ ಹಾಗೂ ನವೀನ್‌ ನಡುವೆ ಈ ಹಿಂದೆ ಗಲಾಟೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನವೀನ್‌ ಅಂಗಡಿಯೊಂದರ ಬಳಿ ಕುಳಿತಿದ್ದಾಗ ಅಲ್ಲಿಗೆ ಬಂದ ಅರುಣ್‌ ಬೈಕ್‌ನಲ್ಲಿ ಬಂದಿದ್ದು, ಬೈಕ್‌ ನಿಲ್ಲಿಸುವ ವಿಚಾರವಾಗಿ ಇಬ್ಬರ ನಡುವೆ ಕಲಹವಾಗಿ, ನವೀನ್‌, ಅರುಣ್‌ ಮೇಲೆ ಹಲ್ಲೆ ನಡೆಸಿದ್ದ. ಇದೇ ವಿಚಾರವಾಗಿ ಇಬ್ಬರ ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next