ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯಲ್ಲಿ ರಸ್ತೆಬದಿ ವ್ಯಾಪಾರಿಗಳನ್ನು ಒಂದೆಡೆ ಸ್ಥಳಾಂತರಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವತಿಯಿಂದ ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಯಲ್ಲಿರುವ ಕಟ್ಟಡಗಳು ಸಮರ್ಪಕ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದ್ದು, ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.
ಪಟ್ಟಣದ ಕಾಡಸಿದ್ದಪ್ಪ ದೇವಸ್ಥಾನದ ರಸ್ತೆಯಲ್ಲಿ ತರಕಾರಿ ವ್ಯಾಪಾರಿಗಳು ಅನೇಕ ವರ್ಷಗಳಿಂದ ತಮ್ಮ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ತರಕಾರಿ ವ್ಯಾಪಾರಿಗಳನ್ನು ಒಂದೆಡೆ ತರುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವತಿಯಿಂದ ಕೋಟೆ ಪಕ್ಕದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ 2 ಬದಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗಿದೆ. ಆದರೆ ಇಲ್ಲಿ ವ್ಯಾಪಾರ ಮಾಡಲು ಯಾವುದೇ ವ್ಯಾಪಾರಿಗಳು ಆಸಕ್ತಿ ತೋರಿಸದ ಕಾರಣ ಮಾರುಕಟ್ಟೆಯು ಬಯಲು ಶೌಚಾಲಯವಾಗಿ ಮಾರ್ಪಟಿದ್ದು, ಮಲಮೂತ್ರ ವಿಸರ್ಜನೆ ಮಾಡಿರುವುದರಿಂದ ಇಡೀ ಮಾರುಕಟ್ಟೆ ಜಾಗ ಗಬ್ಬು ನಾರುತ್ತಿದೆ.
ಮಾರುಕಟ್ಟೆ ಆವರಣದಲ್ಲಿ ಎಲ್ಲಿ ಬೇಕೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡಲಾಗಿದೆ. ಇದೇ ಸ್ಥಳದಲ್ಲಿ ರಾತ್ರಿ ವೇಳೆ ಕುಡುಕರು ಅನಾಯಾಸವಾಗಿ ಬಂದು ಮದ್ಯ ಸೇವಿಸಿದ ಬಾಟಲ್‌ಗಳನ್ನು ಒಡೆದು ಹಾಕಿದ್ದು ಕಂಡುಬರುತ್ತಿದೆ. ಆದರೂ ಪಟ್ಟಣ ಪಂಚಾಯಿತಿ ಅ ಧಿಕಾರಿಗಳು ಕೇಳುವ ಗೊಜಿಗೆ ಹೋಗಿಲ್ಲ.
ಕೋಟೆ ಮೈದಾನದ ಹತ್ತಿರ ನಿರ್ಮಾಣವಾಗಿರುವ ತರಕಾರಿ ಮಾರುಕಟ್ಟೆಗೆ ರಸ್ತೆ ಬದಿ ತರಕಾರಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ ಅಲ್ಲಿಗೆ ಬರಲು ವ್ಯಾಪಾರಿಗಳು ಒಪ್ಪಿರಲಿಲ್ಲ, ಇದರಿಂದಾಗಿ ಲಕ್ಷಾಂತರ ರೂ. ವೆಚ್ಚಮಾಡಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದರೂ ಅವುಗಳ ಬಳಕೆಯಾಗುತ್ತಿಲ್ಲ. ಇನ್ನೂ ಸ್ವತ್ಛವಾಗಿರಬೇಕಿದ್ದ ಮಾರುಕಟ್ಟೆ ಸ್ಥಿತಿ ಅಧೋಗತಿಗೆ ಇಳಿದಿದೆ.
ಇನ್ನಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕಿದೆ. ಅಂಗಡಿಗಳನ್ನು ಸುಸ್ಥಿತಿಗೆ ತಂದು ಹರಾಜು ಮೂಲಕ ವಿಲೇವಾರಿ ಮಾಡಿ ಸುಸಜ್ಜಿತ ಮಾರುಕಟ್ಟೆಯನ್ನಾಗಿಸುವತ್ತ ಗಮನ ಹರಿಸಬೇಕಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿರುವ ಮಳಿಗೆಗಳನ್ನು ಪಡೆಯಲು ವ್ಯಾಪಾರಿಗಳು ಮುಂದೆ ಬಾರದ ಕಾರಣ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಸರಿಪಡಿಸಿ ಕುಡುಕರ ಹಾವಳಿ ತಡೆಗಟ್ಟಲು ಮಾರುಕಟ್ಟೆಯ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದ ನಂತರ ಈ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಗಳು ತಮ್ಮ ವಹಿವಾಟು ನಡೆಸಲು ಒಪ್ಪಿಕೊಂಡಿದ್ದಾರೆ.
ಕಂಪ್ಲಮ್ಮ, ಮುಖ್ಯಾಧಿಕಾರಿ,ಪಪಂ
ಆರ್.ಬಸವರೆಡ್ಡಿ ಕರೂರು