ಸಿರುಗುಪ್ಪ: ರೈತರ ಹಿತದೃಷ್ಟಿಯಿಂದ ಹಾಗೂ ನಿರ್ಬಂಧದ ಸಮಯದಲ್ಲಿ ಅಕ್ಕಿ ಕೊರತೆಯಾಗಬಾರದೆಂಬ ಕಾರಣಕ್ಕೆ ಜಿಲ್ಲಾಡಳಿತ ಅಕ್ಕಿಗಿರಣಿಗಳ ಆರಂಭಕ್ಕೆ ಅನುಮತಿ ನೀಡಿದೆ. ಆದರೆ ಹಲವು ಸಮಸ್ಯೆಗಳ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲೂಕಿನಲ್ಲಿ ಒಟ್ಟು 77 ಅಕ್ಕಿಗಿರಣಿಗಳಿದ್ದು, 60 ಅಕ್ಕಿಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ನಿರ್ಬಂಧದ ನಂತರ ಭತ್ತ ನುರಿಸುವ ಕಾರ್ಯ ಸ್ಥಗಿತವಾಗಿತ್ತು. ಜಿಲ್ಲಾಡಳಿತದ ಆದೇಶದ ನಂತರ ಅಕ್ಕಿ ಗಿರಣಿಗಳು ಕೆಲಸ ಆರಂಭಿಸಿವೆ. ಆದರೆ ಕಾರ್ಮಿಕರ ಕೊರತೆ, ಸಾಗಣೆ ಸಮಸ್ಯೆಯ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ನುರಿಸುವ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕೆಲವು ಗಿರಣಿಗಳಲ್ಲಿ ಭತ್ತ ಮತ್ತು ಅಕ್ಕಿ ಸಂಗ್ರಹವಿದ್ದು, ನಿರ್ಬಂಧದ ತೆರವಿನ ನಂತರ ಅಕ್ಕಿ ಮಾರಾಟವಾಗುತ್ತಿದ್ದು, ಭತ್ತ ನುರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ನೆರೆಯ ಬಿಹಾರ ರಾಜ್ಯದವರು. ಆದರೆ ಜನೆವರಿಯಿಂದ ಮಾರ್ಚ್‌ವರೆಗೆ ಯಾವುದೇ ಗಿರಣಿಗಳು ಕಾರ್ಯನಿರ್ವಹಿಸದ ಕಾರಣ ಬಿಹಾರದ ಸ್ವಗ್ರಾಮಗಳಿಗೆ ತೆರಳಿದ್ದರು. ಅವರಿಗೆ ಗಿರಣಿ ಆರಂಭವಾಗಿರುವ ಕುರಿತು ಮಾಹಿತಿ ನೀಡಲಾಗಿದ್ದರೂ ಮರಳಿ ಬರಲು ರೈಲು ಮತ್ತು ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಸ್ಥಳಿಯರನ್ನೇ ಬಳಸಿಕೊಂಡು ಅಕ್ಕಿಗಿರಣಿಗಳನ್ನು ನಿರ್ವಹಿಸಲಾಗುತ್ತಿದೆ.
ತಾಲೂಕಿನ ಬಹುತೇಕ ಮಿಲ್‌ಗಳು ಭತ್ತ ಬೇಯಿಸಿ ಒಣಗಿಸಿದ ನಂತರ ನುರಿಸುತ್ತವೆ. ಈ ಅಕ್ಕಿಯನ್ನು ಬೆಂಗಳೂರು, ಮುಂಬೈ, ಸೀಮಾಂಧ್ರ, ತೆಲಂಗಾಣ, ಗೋವಾ, ಅಹಮದ್‌ನಗರ ಮುಂತಾದ ಕಡೆಗಳಿಗೆ ಸಾಗಿಸುತ್ತಿವೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಅಲ್ಲಿಗೆ ಅಕ್ಕಿ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅಕ್ಕಿ ತೌಡು, ಭತ್ತದ ಬೂದಿ ಬೇರೆಕಡೆ ಸಾಗಿಸಲು ಹಮಾಲರು ಬರುತ್ತಿಲ್ಲ. ಭತ್ತ ನುರಿಸಿದ ನಂತರ ದೊರೆಯುವ ಅಕ್ಕಿ ತೌಡು ಎಣ್ಣೆ ತಯಾರಿಕೆಗೆ ಬಳಸಲಾಗುತ್ತದೆ. ಈ ತೌಡು ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಎಣ್ಣೆ ತಯಾರಿಸುವ ಕಾರ್ಖಾನೆಗಳು ಸ್ಥಗಿತಗೊಂಡಿವೆ.
ಬೇರೆ ಪ್ರದೇಶದಿಂದ ತಾಲೂಕಿಗೆ ಲಾರಿಗಳು ಬರಲು ತುಂಬ ಸಮಸ್ಯೆ ಎದುರಿಸಬೇಕಾಗಿದೆ. ಲಾರಿ ಮಾಲೀಕರು ಎರಡೂ ಕಡೆಯ ಬಾಡಿಗೆ ಕೇಳುತ್ತಿದ್ದಾರೆ. ಖಾಲಿ ವಾಹನಗಳು ಬಂದರೆ ಪೊಲೀಸರು ರಸ್ತೆ ಪಕ್ಕ ನಿಲ್ಲಿಸುವಂತೆ ಹೇಳುತ್ತಿದ್ಧಾರೆ. ಇದರಿಂದ ಸರಕು ತುಂಬಿದ ವಾಹನಗಳ ಓಡಾಟಕ್ಕೆ ಸಮಸ್ಯೆಯಿಲ್ಲ. ಆದರೆ ಖಾಲಿ ವಾಹನಗಳಿಗೆ ಬಾಡಿಗೆ ನೀಡುವುದು ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಮಾಲೀಕರು.
ನಗರದಲ್ಲಿರುವ ಅಕ್ಕಿಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಕೊರತೆ, ಪೊಲೀಸರ ಅನುಮತಿ ಸಮಸ್ಯೆ ಬಿಟ್ಟರೆ ಅಕ್ಕಿ ಸಾಗಿಸಲು ಯಾವುದೇ ತೊಂದರೆ ಇಲ್ಲವೆಂದು ಅಕ್ಕಿಗಿರಣಿಗಳ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ. ಬಸವರಾಜಪ್ಪ ತಿಳಿಸಿದ್ದಾರೆ.