ಸಿರುಗುಪ್ಪ: ತಾಲೂಕಿನ ಕರೂರು ಭಾಗದಲ್ಲಿರುವ ಜಿಂಕೆಗಳನ್ನು ರಾತ್ರಿ ವೇಳೆ ಬೇಟೆಗಾರರು ಬೇಟೆಯಾಡಲು ಬರುತ್ತಿದ್ದು, ಇಲ್ಲಿರುವ ಜಿಂಕೆಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿವೆ.
ಇಲ್ಲಿ ನೂರಾರು ಸಂಖ್ಯೆಯಲ್ಲಿ ಜಿಂಕೆಗಳು ಗುಂಪು ಗುಂಪಾಗಿ ವಾಸ ಮಾಡುತ್ತಿದ್ದು, ಬೆಳಗಿನ ಜಾವ ಮೇವಿಗಾಗಿ ಪರದಾಡುತ್ತಿದ್ದು, ರಾತ್ರಿ ವೇಳೆ ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿರುವ ಕೃಷಿ ಹೊಂಡಗಳಿಗೆ ಕೂರಿಗನೂರು ಕಾಲುವೆಯಿಂದ ನೀರನ್ನು ತುಂಬಿಸಲಾಗಿದೆ. ಸಮೀಪದಲ್ಲಿರುವ ವೇದಾವತಿ ಹಗರಿ ನದಿಯಲ್ಲಿ ಅಲ್ಪಸ್ವಲ್ಪ ನೀರಿದೆ. ಇದರಿಂದಾಗಿ ಜಿಂಕೆಗಳು ಈ ಭಾಗದಲ್ಲಿ ವಾಸಮಾಡಲು ಕಾರಣವಾಗಿದೆ.
ಸದ್ಯ ಜಿಂಕೆಗಳಿಗೆ ತಿನ್ನಲು ಬೇಕಾದ ಹಸಿರು ಮೇವಿನ ಕೊರತೆ ಇದ್ದರೂ ಕುಡಿಯಲು ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಜಿಂಕೆಗಳು ಇಲ್ಲಿಯೇ ವಾಸ ಮಾಡುತ್ತಿದ್ದು, ಬೆಳಗಿನ ಜಾವ ತಿನ್ನುವ ಮೇವಿಗಾಗಿ ಬಿಸಿಲಿನಲ್ಲಿ ಪರದಾಡಿದರೆ, ರಾತ್ರಿ ವೇಳೆ ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಮತ್ತೂಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಿವೆ.
ಈ ಭಾಗವು ಸೀಮಾಂದ್ರ ಪ್ರದೇಶಕ್ಕೆ ಹತ್ತಿರದಲ್ಲಿರುವುದರಿಂದ ಸೀಮಾಂದ್ರ ಪ್ರದೇಶದ ಕೆಲವು ಬೇಟೆಗಾರರು ರಾತ್ರಿ ವೇಳೆ ಜಿಂಕೆಗಳನ್ನು ಬೇಟೆಯಾಡಲು ಬರುತ್ತಿದ್ದು, ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಹರಸಾಹಸ ಪಡುತ್ತಿವೆ. ಗುಂಪಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೇಟೆಗಾರರ ಗುರಿಗೆ ಬಲಿಯಾಗುತ್ತಿವೆ.
ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ನೀರು ತುಂಬಿದ್ದು, ಇಲ್ಲಿಗೆ ಇಳಿ ಸಂಜೆ ಹೊತ್ತಿನಲ್ಲಿ ನೀರು ಕುಡಿಯಲು ಬರುವ ಜಿಂಕೆ ಬೇಟೆಯಾಡಲು ಬಲೆಯನ್ನು ಬೇಟೆಗಾರರು ಬಳಸುತ್ತಿದ್ದಾರೆ. ಜಿಂಕೆ ಬೇಟೆಯಾಡುವವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದು ಜಿಂಕೆ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು.
•
ವೈ.ಕೃಷ್ಣಾರೆಡ್ಡಿ,
ಕರೂರು ಗ್ರಾಮದ ರೈತರು.
ಕರೂರು ಭಾಗದಲ್ಲಿ ಜಿಂಕೆಗಳನ್ನು ಬೇಟೆಯಾಡಲು ಸೀಮಾಂಧ್ರ ಪ್ರದೇಶದಿಂದ ಕೆಲವರು ಬರುತ್ತಾರೆನ್ನುವ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಈ ಭಾಗದಲ್ಲಿ ರಾತ್ರಿವೇಳೆ ಗಸ್ತು ತಿರುಗುತ್ತಿದ್ದಾರೆ. ಈಗಾಗಲೇ ಜಿಂಕೆ ಬೇಟೆಯಾಡುವ ಮೂವರನ್ನು ಬಂಧಿಸಲಾಗಿದೆ.
•
ಪಂಪಾಪತಿ ನಾಯ್ಕ,
ವಲಯ ಅರಣ್ಯಾಧಿಕಾರಿ.